Showing posts with label JORGE CARRERA ANDRADE - MICROGRAMS ಚಿಕಣಿಚಿತ್ರಗಳು-ಮೈಕ್ರೊಗ್ರಾಮ್ಸ್. Show all posts
Showing posts with label JORGE CARRERA ANDRADE - MICROGRAMS ಚಿಕಣಿಚಿತ್ರಗಳು-ಮೈಕ್ರೊಗ್ರಾಮ್ಸ್. Show all posts

Wednesday, August 17, 2022

ಚಿಕಣಿಚಿತ್ರಗಳು-ಮೈಕ್ರೊಗ್ರಾಮ್ಸ್ - JORGE CARRERA ANDRADE's 'MICROGRAMS'

ಇಕ್ವಡೋರ್ ದೇಶದ ಕವಿ ಹೊರ್ಹೆ ಕರ್ರೆರಾ ಅಂದ್ರಾದೆ (Jorge Carrera Andrade, 1902-1978) ಬರೆದ ಕಿರುಗವನಗಳು ಇವು.  ಈ ಕಿರುಗವನಗಳಿಗೆ ಅವರು ‘ಮೈಕ್ರೊಗ್ರಾಮ್ಸ್’ ಎಂದು ಹೆಸರಿಟ್ಟರು.  ಜಪಾನಿ ಕಾವ್ಯರೂಪ ‘ಹಾಯ್ಕು’-ವಿನ ಹಾಗೆ ಕಾಣುವಂತಹ ಚುಟುಕಾದ ಕವನಗಳು ಇವು.  ಹೊರ್ಹೆ ಕರ್ರೆರಾ ಅಂದ್ರಾದೆ-ಯವರ ‘ಮೈಕ್ರೊಗ್ರಾಮ್ಸ್’-ಗಳನ್ನು ಸ್ಪಾನಿಶ್ ಭಾಷೆಯಿಂದ ಇಂಗ್ಲಿಷ್-ಗೆ ಅನುವಾದ ಮಾಡಿದ ಅಲೆಹಂದ್ರೊ ಡಿ ಅಕೊಸ್ತ (Alejandro de Acosta) ಮತ್ತು ಜಾಷುವಾ ಬೆಕ್ಮನ್-ರವರು (Joshua Beckman) ಈ ಕಾವ್ಯರೂಪದ ಬಗ್ಗೆ ಹೀಗೆನ್ನುತ್ತಾರೆ:     

 

“ಸಾಮಾನ್ಯವಾಗಿ ಮೂರರಿಂದ ಆರು ಸಾಲುಗಳ ನಡುವಿನ ಚಿಕ್ಕ ಕವಿತೆಯಾಗಿರುವ ಮೈಕ್ರೊಗ್ರಾಮ್, ಈ ಲೋಕದಲ್ಲಿ ಬದುಕಿರುವ ಸಣ್ಣ-ಪುಟ್ಟ ಜೀವಿಗಳ ಬಗ್ಗೆಯಾಗಿರುತ್ತೆ.  ಸಸ್ಯಗಳು ಹಾಗೂ ಪ್ರಾಣಿಗಳು, ಎರಡೂ ತರಹದ ಜೀವಿಗಳು ಮೈಕ್ರೊಗ್ರಾಮ್-ಗಳ ವಸ್ತುವಾಗುತ್ತವೆ.  ರಚನಾತ್ಮಕವಾಗಿ ವಿಶಿಷ್ಟವಾಗಿದ್ದರೂ, ಮೈಕ್ರೊಗ್ರಾಮ್-ಗಳು ತಮ್ಮ ಹೊಸತನವನ್ನು ಸೌಮ್ಯತೆ ಹಾಗೂ ಔಚಿತ್ಯದಿಂದ ಪ್ರಸತುತಪಡಿದುತ್ತೆ.  ಅತ್ಯಂತ ವ್ಯಕ್ತಿನಿಷ್ಠವಾದ ವೈಯಕ್ತಿಕ ಚರಿತ್ರೆಗಳನ್ನು ಬಳಸುತ್ತಾ, ಅಂದ್ರಾದೆಯು ಅಲ್ಲಿ ವಸ್ತುನಿಷ್ಟತೆಯನ್ನು ಕಾಣುತ್ತಾನೆ ಹಾಗೂ ಕೋರುತ್ತಾನೆ – ಒಂದು ವೈಯಕ್ತಿಕ-ರೂಪದ, ಉದಾರವಾದ ವಸ್ತುನಿಷ್ಟತೆ.”

 

ಹೊರ್ಹೆ ಕರ್ರೆರಾ ಅಂದ್ರಾದೆಯು ಕವಿ ಹಾಗೂ ಪ್ರಬಂಧಕಾರರಾಗಿದ್ದರು, ಅಲ್ಲದೆ ಪತ್ರಕರ್ತರೂ ಆಗಿದ್ದರು.  ಇಕ್ವಡೋರ್ ದೇಶದ ರಾಯಭಾರಿಯಾಗಿ ಹಲವು ದೇಶಗಳಲ್ಲಿದ್ದರು. ಈ ವಿದೇಶದ ಅನುಭವಗಳು ಅವರ ಸಾಹಿತ್ಯಕ್ಕೆ ಒಂದು ತರಹದ ‘ಅಂತರ್‌ರಾಷ್ಟ್ರೀಯ’ ದೃಷ್ಟಿಕೋನ ಕೊಟ್ಟಿತ್ತು.  

 

ಎರಡು ದಿನಗಳ ಹಿಂದೆ ಮಿತ್ರರಾದ ಕಮಲಾಕರ ಕಡವೆಯವರು Kamalakar Bhat ಅಂದ್ರಾದೆಯವರ ಕೆಲವು ‘ಮೈಕ್ರೊಗ್ರಾಮ್ಸ್’-ಗಳನ್ನು ಪೋಸ್ಟ್ ಮಾಡಿದ್ದರು.  ನೋಡಿ, ಓದಿ ‘ಅಬ್ಬಬ್ಬಾ’ ಅಂದನಿಸಿತು; ‘ಎಷ್ಟು ಚಂದ ಇವೆ’, ‘ಎಂತ ವಿಶಿಷ್ಠ ದೃಷ್ಟಿಕೋನ’ ‘ಕವಿಗಳು ಹೇಗೆ ಹೇಗೆಲ್ಲಾ ಲೋಕವನ್ನು ನೋಡುತ್ತಾರೆ, ಅಲ್ವಾ’ ಎಂದೆಲ್ಲಾ ಅನಿಸಿತು.  ಅಂದೇ ರಾತ್ರಿ ಕೂತು ಅನುವಾದ ಮಾಡಿದೆ.  ನೋಡಲಿಕ್ಕ ಚಿಕ್ಕ್-ಚಿಕ್ಕ್ ಪದ್ಯಗಳ ಹಂಗ್ ಕಾಣ್ತಾವ್ರೀ, ಅನುವಾದ ಮಾಡೋದು ಬಾಳ ತ್ರಾಸ ಅದ ರೀ ...  

 

ಮೂಲ: MICROGRAMS

ಕವಿ: ಹೊರ್ಹೆ ಕರ್ರೆರಾ ಅಂದ್ರಾದೆ, ಇಕ್ವಡೋರ್

JORGE CARRERA ANDRADE, EQUADOR

Translated from the Spanish by Alejandro de Acosta and Joshua Beckman

 

ಚಿಕಣಿಚಿತ್ರಗಳು - ಮೈಕ್ರೊಗ್ರಾಮ್ಸ್

 

ಜೋಳದ ಕಾಳು

ಪ್ರತಿ ಮುಂಜಾನೆ

ಹುಂಜದ ಕೊಕ್ಕಿನಲಿ

ಪ್ರತಿ ಕಾಳೂ

ಹಾಡಿನ ದಿಂಡಾಗುತ್ತೆ 

 

ಸಿಂಪಿ

ಎರಡು ಚಿಪ್ಪುಗಳ ಮೃದ್ವಂಗಿ:

ನಿನ್ನ ಸುಣ್ಣದ ಸಂದೂಕು

ಯಾವುದೋ ಭಗ್ನನೌಕೆಯ

ದಸ್ತಾವೇಜನ್ನು ಭದ್ರವಾಗಿಟ್ಟಿದೆ

 

ಬೆರಳಚ್ಚಿಕೆ

ನಡುರಾತ್ರಿಯ ನೆಲಗಪ್ಪೆ: ನಿನ್ನ ಪುಟ್ಟ

ಬೆರಳಚ್ಚಿಕೆಗಳು 

ಚಂದ್ರನ ಖಾಲಿ ಹಾಳೆಯ ತಟ್ಟುವುದು

 

ಬಸವನಹುಳು ಎಂದರೆ

ಬಸವನಹುಳು:

ದೇವರು ನೆಲವನ್ನು ಅಳೆಯುವುದಕ್ಕಾಗಿ 

ಬಳಸುವ ಸಣ್ಣ ಅಳತೆಟೇಪು

 

ಕಡಲ್ಹಕ್ಕಿಯ ವರ್ಣನೆ

ಕಡಲ್ಹಕ್ಕಿ:

ಮೌನದ ಅಲೆಯಲ್ಲಿ

ನೊರೆಯ ಹುಬ್ಬು.

ಭಗ್ನನೌಕೆಯ ಕರವಸ್ತ್ರ.

ಆಕಾಶಲಿಪಿ.

 

ಅಕ್ಷರಮಾಲೆ

ಹಕ್ಕಿಗಳು

ದೇವರ ಕೈಬರಹ

 

ಎರೆಹುಳವು

ಮಣ್ಣಿನಲ್ಲಿ ಗುರುತ್ತಿಸುತ್ತಿರುತ್ತೆ 

ಎಡೆಬಿಡದೆ

ನಿಗೂಢ ಅಕ್ಷರವೊಂದರ

ಉದ್ದನೆಯ ಅಪೂರ್ಣ ರೇಖೆಯನ್ನು 

*****



ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...