ಇಕ್ವಡೋರ್ ದೇಶದ ಕವಿ ಹೊರ್ಹೆ ಕರ್ರೆರಾ ಅಂದ್ರಾದೆ (Jorge Carrera Andrade, 1902-1978) ಬರೆದ ಕಿರುಗವನಗಳು ಇವು. ಈ ಕಿರುಗವನಗಳಿಗೆ ಅವರು ‘ಮೈಕ್ರೊಗ್ರಾಮ್ಸ್’ ಎಂದು ಹೆಸರಿಟ್ಟರು. ಜಪಾನಿ ಕಾವ್ಯರೂಪ ‘ಹಾಯ್ಕು’-ವಿನ ಹಾಗೆ ಕಾಣುವಂತಹ ಚುಟುಕಾದ ಕವನಗಳು ಇವು. ಹೊರ್ಹೆ ಕರ್ರೆರಾ ಅಂದ್ರಾದೆ-ಯವರ ‘ಮೈಕ್ರೊಗ್ರಾಮ್ಸ್’-ಗಳನ್ನು ಸ್ಪಾನಿಶ್ ಭಾಷೆಯಿಂದ ಇಂಗ್ಲಿಷ್-ಗೆ ಅನುವಾದ ಮಾಡಿದ ಅಲೆಹಂದ್ರೊ ಡಿ ಅಕೊಸ್ತ (Alejandro de Acosta) ಮತ್ತು ಜಾಷುವಾ ಬೆಕ್ಮನ್-ರವರು (Joshua Beckman) ಈ ಕಾವ್ಯರೂಪದ ಬಗ್ಗೆ ಹೀಗೆನ್ನುತ್ತಾರೆ:
“ಸಾಮಾನ್ಯವಾಗಿ ಮೂರರಿಂದ ಆರು ಸಾಲುಗಳ ನಡುವಿನ ಚಿಕ್ಕ ಕವಿತೆಯಾಗಿರುವ ಮೈಕ್ರೊಗ್ರಾಮ್, ಈ ಲೋಕದಲ್ಲಿ ಬದುಕಿರುವ ಸಣ್ಣ-ಪುಟ್ಟ ಜೀವಿಗಳ ಬಗ್ಗೆಯಾಗಿರುತ್ತೆ. ಸಸ್ಯಗಳು ಹಾಗೂ ಪ್ರಾಣಿಗಳು, ಎರಡೂ ತರಹದ ಜೀವಿಗಳು ಮೈಕ್ರೊಗ್ರಾಮ್-ಗಳ ವಸ್ತುವಾಗುತ್ತವೆ. ರಚನಾತ್ಮಕವಾಗಿ ವಿಶಿಷ್ಟವಾಗಿದ್ದರೂ, ಮೈಕ್ರೊಗ್ರಾಮ್-ಗಳು ತಮ್ಮ ಹೊಸತನವನ್ನು ಸೌಮ್ಯತೆ ಹಾಗೂ ಔಚಿತ್ಯದಿಂದ ಪ್ರಸತುತಪಡಿದುತ್ತೆ. ಅತ್ಯಂತ ವ್ಯಕ್ತಿನಿಷ್ಠವಾದ ವೈಯಕ್ತಿಕ ಚರಿತ್ರೆಗಳನ್ನು ಬಳಸುತ್ತಾ, ಅಂದ್ರಾದೆಯು ಅಲ್ಲಿ ವಸ್ತುನಿಷ್ಟತೆಯನ್ನು ಕಾಣುತ್ತಾನೆ ಹಾಗೂ ಕೋರುತ್ತಾನೆ – ಒಂದು ವೈಯಕ್ತಿಕ-ರೂಪದ, ಉದಾರವಾದ ವಸ್ತುನಿಷ್ಟತೆ.”
ಹೊರ್ಹೆ ಕರ್ರೆರಾ ಅಂದ್ರಾದೆಯು ಕವಿ ಹಾಗೂ ಪ್ರಬಂಧಕಾರರಾಗಿದ್ದರು, ಅಲ್ಲದೆ ಪತ್ರಕರ್ತರೂ ಆಗಿದ್ದರು. ಇಕ್ವಡೋರ್ ದೇಶದ ರಾಯಭಾರಿಯಾಗಿ ಹಲವು ದೇಶಗಳಲ್ಲಿದ್ದರು. ಈ ವಿದೇಶದ ಅನುಭವಗಳು ಅವರ ಸಾಹಿತ್ಯಕ್ಕೆ ಒಂದು ತರಹದ ‘ಅಂತರ್‌ರಾಷ್ಟ್ರೀಯ’ ದೃಷ್ಟಿಕೋನ ಕೊಟ್ಟಿತ್ತು.
ಎರಡು ದಿನಗಳ ಹಿಂದೆ ಮಿತ್ರರಾದ ಕಮಲಾಕರ ಕಡವೆಯವರು Kamalakar Bhat ಅಂದ್ರಾದೆಯವರ ಕೆಲವು ‘ಮೈಕ್ರೊಗ್ರಾಮ್ಸ್’-ಗಳನ್ನು ಪೋಸ್ಟ್ ಮಾಡಿದ್ದರು. ನೋಡಿ, ಓದಿ ‘ಅಬ್ಬಬ್ಬಾ’ ಅಂದನಿಸಿತು; ‘ಎಷ್ಟು ಚಂದ ಇವೆ’, ‘ಎಂತ ವಿಶಿಷ್ಠ ದೃಷ್ಟಿಕೋನ’ ‘ಕವಿಗಳು ಹೇಗೆ ಹೇಗೆಲ್ಲಾ ಲೋಕವನ್ನು ನೋಡುತ್ತಾರೆ, ಅಲ್ವಾ’ ಎಂದೆಲ್ಲಾ ಅನಿಸಿತು. ಅಂದೇ ರಾತ್ರಿ ಕೂತು ಅನುವಾದ ಮಾಡಿದೆ. ನೋಡಲಿಕ್ಕ ಚಿಕ್ಕ್-ಚಿಕ್ಕ್ ಪದ್ಯಗಳ ಹಂಗ್ ಕಾಣ್ತಾವ್ರೀ, ಅನುವಾದ ಮಾಡೋದು ಬಾಳ ತ್ರಾಸ ಅದ ರೀ ...
ಮೂಲ: MICROGRAMS
ಕವಿ: ಹೊರ್ಹೆ ಕರ್ರೆರಾ ಅಂದ್ರಾದೆ, ಇಕ್ವಡೋರ್
JORGE CARRERA ANDRADE, EQUADOR
Translated from the Spanish by Alejandro de Acosta and Joshua Beckman
ಚಿಕಣಿಚಿತ್ರಗಳು - ಮೈಕ್ರೊಗ್ರಾಮ್ಸ್
ಜೋಳದ ಕಾಳು
ಪ್ರತಿ ಮುಂಜಾನೆ
ಹುಂಜದ ಕೊಕ್ಕಿನಲಿ
ಪ್ರತಿ ಕಾಳೂ
ಹಾಡಿನ ದಿಂಡಾಗುತ್ತೆ
ಸಿಂಪಿ
ಎರಡು ಚಿಪ್ಪುಗಳ ಮೃದ್ವಂಗಿ:
ನಿನ್ನ ಸುಣ್ಣದ ಸಂದೂಕು
ಯಾವುದೋ ಭಗ್ನನೌಕೆಯ
ದಸ್ತಾವೇಜನ್ನು ಭದ್ರವಾಗಿಟ್ಟಿದೆ
ಬೆರಳಚ್ಚಿಕೆ
ನಡುರಾತ್ರಿಯ ನೆಲಗಪ್ಪೆ: ನಿನ್ನ ಪುಟ್ಟ
ಬೆರಳಚ್ಚಿಕೆಗಳು
ಚಂದ್ರನ ಖಾಲಿ ಹಾಳೆಯ ತಟ್ಟುವುದು
ಬಸವನಹುಳು ಎಂದರೆ
ಬಸವನಹುಳು:
ದೇವರು ನೆಲವನ್ನು ಅಳೆಯುವುದಕ್ಕಾಗಿ
ಬಳಸುವ ಸಣ್ಣ ಅಳತೆಟೇಪು
ಕಡಲ್ಹಕ್ಕಿಯ ವರ್ಣನೆ
ಕಡಲ್ಹಕ್ಕಿ:
ಮೌನದ ಅಲೆಯಲ್ಲಿ
ನೊರೆಯ ಹುಬ್ಬು.
ಭಗ್ನನೌಕೆಯ ಕರವಸ್ತ್ರ.
ಆಕಾಶಲಿಪಿ.
ಅಕ್ಷರಮಾಲೆ
ಹಕ್ಕಿಗಳು
ದೇವರ ಕೈಬರಹ
ಎರೆಹುಳವು
ಮಣ್ಣಿನಲ್ಲಿ ಗುರುತ್ತಿಸುತ್ತಿರುತ್ತೆ
ಎಡೆಬಿಡದೆ
ನಿಗೂಢ ಅಕ್ಷರವೊಂದರ
ಉದ್ದನೆಯ ಅಪೂರ್ಣ ರೇಖೆಯನ್ನು
*****
No comments:
Post a Comment