Showing posts with label SEAMUS HEANEY - DEATH OF A NATURALIST ಒಬ್ಬ ನಿಸರ್ಗಾಧ್ಯಾಯಿಯ ಅಂತ್ಯ. Show all posts
Showing posts with label SEAMUS HEANEY - DEATH OF A NATURALIST ಒಬ್ಬ ನಿಸರ್ಗಾಧ್ಯಾಯಿಯ ಅಂತ್ಯ. Show all posts

Thursday, July 7, 2022

ಒಬ್ಬ ನಿಸರ್ಗಾಧ್ಯಾಯಿಯ ಅಂತ್ಯ SEAMUS HEANEY'S 'DEATH OF A NATURALIST'

ಎರಡು ವರುಷಗಳ ಹಿಂದೆ ನಾನು ಶೇಯ್ಮಸ್ ಹೀನಿಯವರ (SEAMUS HEANEY) ಇಂಗ್ಲಿಷ್ ಕವನ ‘ಡಿಗಿಂಗ್’ಅನ್ನು (Digging) ಕನ್ನಡಕ್ಕೆಅನುವಾದ ಮಾಡಿದ್ದೆ.  ಹೀನಿಯವರ ವಿಶ್ವ-ಪ್ರಸಿದ್ಧ ಕವನ.  ಅದು ನನ್ನ ಮೊದಲ ಇಂಗ್ಲಿಷ್-ಟು-ಕನ್ನಡ ಕವನಾನುವಾದವಾಗಿತ್ತು.  ‘ಬಂದ್ರೆಬಂತು ಹೋದ್ರೆ ಹೋಯ್ತು’ ಅಂತ ಮೊಂಡು ಧೈರ್ಯದಿಂದ ಕೈಗೊಂಡ ಕಾರ್ಯವಾಗಿತ್ತು ಆಗ.  ಕೆಲವರು ಕಾವ್ಯಾಸಕ್ತರು ಓದಿದರು, ಕೆಲವರು ಓದಿ ತಮ್ಮ ಮೆಚ್ಚುಗೆ ತಿಳಿಸಿದರು.  ಅದೂ ಓಳ್ಳೆಯದೇ ಆಯ್ತು.  ಹೀನಿಯವರ ಸುಮಾರು ಎಲ್ಲಾ ಕವನ ಸಂಕಲನಗಳನ್ನ ಕೊಂಡಿರುವೆ; ಕವನಗಳನ್ನು ಓದುತ್ತಿರುವಾಗೆಲ್ಲಾ ಅನುವಾದದ ಆಸೆ ಚಿಗುರುತ್ತೆ, ಆದರೆ ಆಗಿದ್ದ ಮೊಂಡು ಧೈರ್ಯ ಈ ಮಧ್ಯೆ ಬರಲಿಲ್ಲ.  ಈಗ ಬಂದಂತಿದೆ; ಈಗ ಎರಡು ವರುಷಗಳ ನಂತರ ಮತ್ತೆ ಶೇಯ್ಮಸ್ ಹೀನಿ- ಯವರ ಕವನವೊಂದನ್ನು ಕನ್ನಡಾನುವಾದಕ್ಕೆ ತೆಗೆದುಕೊಂಡಿರುವೆ.  ಅವರ ಮತ್ತೊಂದು ಹೆಸರಾಂತ ಕವನ, ಅವರ ಮೊದಲ ಸಂಕಲನದ ಹೆಸರು ಹೊತ್ತ ಕವನ – Death of a Naturalist ... Digging-ನಲ್ಲಿ ಇದ್ದಹಾಗೆ ಈ ಕವನದಲ್ಲೂ ತಮ್ಮ ಬಾಲ್ಯಕಾಲದ ನೆನಪುಗಳನ್ನು ಶಬ್ಧಗಳ, ದೃಶ್ಯಗಳ ಮೂಲಕ ಅಪೂರ್ವವಾಗಿ ಹೆಣೆದಿದ್ದಾರೆ – ಮೊದಲ ಭಾಗ ದೃಶ್ಯಗಳಿಂದ ತುಂಬಿದೆ; ಎರಡನೆಯ ಭಾಗ ಶಬ್ಧಗಳ ಸಾಮ್ರಾಜ್ಯ; ಮೊದಲ ಭಾಗ ಯತಾರ್ಥದ ವರ್ಣನೆಯಾದರೆ, ಎರಡನೆಯ ಭಾಗ ಕಲ್ಪನೆಯ ನಾಗಾಲೋಟ ...   

 

ಇಂಗ್ಲಿಷ್ ಮೂಲ: DEATH OF A NATURALIST

ಕವಿ: ಶೇಯ್ಮಸ್ ಹೀನಿ, ಐಯರ್‌ಲ್ಯಾಂಡ್

SEAMUS HEANEY, IRELAND

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


ಒಬ್ಬ ನಿಸರ್ಗಾಧ್ಯಾಯಿಯ ಅಂತ್ಯ

 

ವರುಷವೆಲ್ಲ ಅಗಸೆನಾರಿನಕಟ್ಟೆ ಕೊಳೆಯುತ್ತಿತ್ತು 

ಊರಿನ ಮಧ್ಯದಲ್ಲಿ; ಹಸಿರು ಹಸಿರಾಗಿ ಭಾರ-ತಲೆಯ ಹೊತ್ತು

ಅಗಸೆನಾರು ಅಲ್ಲಿ ಕೊಳೆತುಹೋಗಿತ್ತು,  

ಹೆಪ್ಪುಮಣ್ಣಿನ ಭಾರದಿಂದ ಜಗ್ಗಿಹೋಗಿತ್ತು.   

ದಿನವೂ ಅದು ಸೂರ್ಯನ ಉರಿಯಡಿಯಲ್ಲಿ ಬೆವರುತ್ತಿತ್ತು, 

ನೀರ್ಗುಳ್ಳೆಗಳು ಮೆತ್ತಗೆ ಗುಳುಗುಳಿಸುತ್ತಿದ್ದವು, ನೀಲಿನೊಣಗಳು

ಆ ಕಂಪಿನ ಸುತ್ತ ಬಲವಾದ ಸದ್ದಿನ ನವಿರುಜಾಲರಿಯನ್ನು ಹೆಣೆಯುತ್ತಿದ್ದವು.

ಅಲ್ಲಿದ್ದವು ಡ್ರ್ಯಾಗನ್‌ದುಂಬಿಗಳು, ಚುಕ್ಕೆಚಿಟ್ಟೆಗಳು, 

ಆದರೆ ಎಲ್ಲಕ್ಕಿಂತ ಮೇಲಾಗಿ ದಟ್ಟವಾದ ಬೆಚ್ಚನೆಯ

ಕಪ್ಪೆಮೊಟ್ಟೆಗಳ ಜೊಲ್ಲು ಹರಡುತ್ತಿತ್ತಲ್ಲಿ ಹೆಪ್ಪುಗಟ್ಟಿದ ನೀರಿನಂತೆ

ದಡಗಳ ನೆರಳಿನಲ್ಲಿ,  ಇಲ್ಲಿ, ಪ್ರತಿ ವಸಂತಮಾಸ,

ನಾನು ಜ್ಯಾಮ್ ಬಾಟ್ಲಿಗಳಲ್ಲಿ ಈ ಲೋಳೆಗಟ್ಟಿದ ಚುಕ್ಕೆಗಳನ್ನು 

ತುಂಬಿಸಿ ಮನೆಯ ಜನ್ನಲಕಟ್ಟೆಗಳಲ್ಲಿ, 

ಶಾಲೆಯ ಶೆಲ್ಫ್-ಗಳಲ್ಲಿ ಸಾಲಾಗಿ ನಿಲ್ಲಿಸುವೆ, ಕಾಯುವೆ 

ಕಾವಲಿರುವೆ ಆ ಕೊಬ್ಬುತ್ತಿರುವ ಚುಕ್ಕೆಗಳು ಚುರುಕೀಜುವ ಗೊದಮೊಟ್ಟೆಗಳಾಗಿ

ಸ್ಫೋಟವಾಗುವ ವರೆಗೂ.  ಮಿಸ್ ವಾಲ್ಸ್ ಹೇಳುವರು ನಮಗೆ

ಅಪ್ಪ-ಕಪ್ಪೆಯನ್ನು ಗೋಂಕರುಕಪ್ಪೆಯೆಂದು ಕರೆಯುತ್ತಾರೆಂದು, 

ಅವನು ಹೇಗೆ ವಟಗುಟ್ಟುತ್ತಾನೆಂದು, ಮತ್ತೆ ಅಮ್ಮ-ಕಪ್ಪೆ

ನೂರಾರು ಮೊಟ್ಟೆಗಳನ್ನು ಇಡುತ್ತಾಳೆಂದು, ಇದನ್ನೆ ಕಪ್ಪೆಮೊಟ್ಟೆಗಳ

ಜೊಲ್ಲು ಎಂದನ್ನುತ್ತಾರೆಂದು.  

ಕಪ್ಪೆಗಳನ್ನ ನೋಡಿ ಹವಾಮಾನ ಕೂಡ ಹೇಳಬಹುದಂತೆ

ಅವು ಬಿಸಿಲ್ಗಾಲದಲ್ಲಿ ಹಳದಿಯಾಗಿರುತ್ತವೆ,

ಮಳೆಗಾಲದಲ್ಲಿ ಕಂದಾಗಿರುತ್ತವಂತೆ. 

 

ಮತ್ತೊಂದು ಸುಡುವ ದಿನದಂದು ಹುಲ್ಲಿನಲ್ಲಿ ಬಿದ್ದ 

ಸೆಗಣಿಯಿಂದಾಗಿ ಹೊಲಗಳು ನಾರುತ್ತಿದ್ದಾಗ, ಕುಪಿತ ಕಪ್ಪೆಗಳು

ಅಗಸೆನಾರಿನಕಟ್ಟೆಗೆ ದಾಳಿಮಾಡಿದವು; ಈ ಹಿಂದೆ ಎಂದೂ ಕೇಳಿರದ 

ಕರ್ಕಶ ವಟವಟಗಳ ಕೇಳಿದೆ ನಾನು

ಬೇಲಿಗಳ ಹಿಂದೆ ತಲೆಬಗ್ಗಿಸಿಕೊಂಡೆ.

ಗಾಳಿಯಲ್ಲಿ ದಟ್ಟವಾಗಿ ಹರಡಿತ್ತು ಈ ಘನ ಮೇಳದ ಸದ್ದು.

ಆ ಕಟ್ಟೆಯ ಜಾಗದಲ್ಲಿ, ಡೊಳ್ಳುಹೊಟ್ಟೆಯ ಕಪ್ಪೆಗಳು ನಿಮಿರಿ 

ನಿಂತಿದ್ದವು ಹೆಪ್ಪುಮಣ್ಣಿನಲ್ಲಿ; ಅವುಗಳ ಜೋಲು ಕತ್ತುಗಳು ಬಡಿಯುತ್ತಿದ್ದವು

ದೋಣಿಹಾಯಿಗಳಂತೆ.  ಕೆಲವು ಕಪ್ಪೆಗಳು ಕುಪ್ಪಳಿಸುತ್ತಿದ್ದವು: 

ಆ ಅಪ್ಪಳ, ಪೊಳಪ್ ಪೊಳಪ್ ಸಪ್ಪಳ ಅಸಹ್ಯ ಬೆದರಿಕೆಗಳಂತೆ ಕೇಳಿಸಿತು.

ಕೆಲವು ಕಪ್ಪೆಗಳು ಕೂತಿದ್ದವು

ಸನ್ನದ್ಧವಾಗಿ ಮಣ್ಣುಬಾಂಬುಗಳಂತೆ, ಅವುಗಳ ಮೊಂಡು ತಲೆಗಳು ಕೆಪ್ಪೆ ಕೂಗುತ್ತಿದ್ದವು.

ನನಗೆ ವಾಂತಿ ಬಂತು, ನಾನಲ್ಲಿಂದ ತಿರುಗಿ ಓಡಿದೆ.  ಆ ಭಾರಿ ಲೋಳೆ ರಾಜರು

ಸೇಡು ತೀರಿಸಿಕೊಳ್ಳುವುದಕ್ಕಾಗಿ ಸೇರಿದ್ದರು ಅಲ್ಲಿ, 

ನಾನೆಲ್ಲಾದರು ಕೈ ಅದ್ದಿದ್ದರೆ 

ಆ ಮೊಟ್ಟೆಜೊಲ್ಲು ನನ್ನ ಕೈಯ ಕಚ್ಚಿಕೊಳ್ಳುತಿತ್ತು 

ನನಗೆ ಗೊತ್ತಿತ್ತು.

 

*****


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...