ಎರಡು ವರುಷಗಳ ಹಿಂದೆ ನಾನು ಶೇಯ್ಮಸ್ ಹೀನಿಯವರ (SEAMUS HEANEY) ಇಂಗ್ಲಿಷ್ ಕವನ ‘ಡಿಗಿಂಗ್’ಅನ್ನು (Digging) ಕನ್ನಡಕ್ಕೆಅನುವಾದ ಮಾಡಿದ್ದೆ. ಹೀನಿಯವರ ವಿಶ್ವ-ಪ್ರಸಿದ್ಧ ಕವನ. ಅದು ನನ್ನ ಮೊದಲ ಇಂಗ್ಲಿಷ್-ಟು-ಕನ್ನಡ ಕವನಾನುವಾದವಾಗಿತ್ತು. ‘ಬಂದ್ರೆಬಂತು ಹೋದ್ರೆ ಹೋಯ್ತು’ ಅಂತ ಮೊಂಡು ಧೈರ್ಯದಿಂದ ಕೈಗೊಂಡ ಕಾರ್ಯವಾಗಿತ್ತು ಆಗ. ಕೆಲವರು ಕಾವ್ಯಾಸಕ್ತರು ಓದಿದರು, ಕೆಲವರು ಓದಿ ತಮ್ಮ ಮೆಚ್ಚುಗೆ ತಿಳಿಸಿದರು. ಅದೂ ಓಳ್ಳೆಯದೇ ಆಯ್ತು. ಹೀನಿಯವರ ಸುಮಾರು ಎಲ್ಲಾ ಕವನ ಸಂಕಲನಗಳನ್ನ ಕೊಂಡಿರುವೆ; ಕವನಗಳನ್ನು ಓದುತ್ತಿರುವಾಗೆಲ್ಲಾ ಅನುವಾದದ ಆಸೆ ಚಿಗುರುತ್ತೆ, ಆದರೆ ಆಗಿದ್ದ ಮೊಂಡು ಧೈರ್ಯ ಈ ಮಧ್ಯೆ ಬರಲಿಲ್ಲ. ಈಗ ಬಂದಂತಿದೆ; ಈಗ ಎರಡು ವರುಷಗಳ ನಂತರ ಮತ್ತೆ ಶೇಯ್ಮಸ್ ಹೀನಿ- ಯವರ ಕವನವೊಂದನ್ನು ಕನ್ನಡಾನುವಾದಕ್ಕೆ ತೆಗೆದುಕೊಂಡಿರುವೆ. ಅವರ ಮತ್ತೊಂದು ಹೆಸರಾಂತ ಕವನ, ಅವರ ಮೊದಲ ಸಂಕಲನದ ಹೆಸರು ಹೊತ್ತ ಕವನ – Death of a Naturalist ... Digging-ನಲ್ಲಿ ಇದ್ದಹಾಗೆ ಈ ಕವನದಲ್ಲೂ ತಮ್ಮ ಬಾಲ್ಯಕಾಲದ ನೆನಪುಗಳನ್ನು ಶಬ್ಧಗಳ, ದೃಶ್ಯಗಳ ಮೂಲಕ ಅಪೂರ್ವವಾಗಿ ಹೆಣೆದಿದ್ದಾರೆ – ಮೊದಲ ಭಾಗ ದೃಶ್ಯಗಳಿಂದ ತುಂಬಿದೆ; ಎರಡನೆಯ ಭಾಗ ಶಬ್ಧಗಳ ಸಾಮ್ರಾಜ್ಯ; ಮೊದಲ ಭಾಗ ಯತಾರ್ಥದ ವರ್ಣನೆಯಾದರೆ, ಎರಡನೆಯ ಭಾಗ ಕಲ್ಪನೆಯ ನಾಗಾಲೋಟ ...
ಇಂಗ್ಲಿಷ್ ಮೂಲ: DEATH OF A NATURALIST
ಕವಿ: ಶೇಯ್ಮಸ್ ಹೀನಿ, ಐಯರ್‌ಲ್ಯಾಂಡ್
SEAMUS HEANEY, IRELAND
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಒಬ್ಬ ನಿಸರ್ಗಾಧ್ಯಾಯಿಯ ಅಂತ್ಯ
ವರುಷವೆಲ್ಲ ಅಗಸೆನಾರಿನಕಟ್ಟೆ ಕೊಳೆಯುತ್ತಿತ್ತು
ಊರಿನ ಮಧ್ಯದಲ್ಲಿ; ಹಸಿರು ಹಸಿರಾಗಿ ಭಾರ-ತಲೆಯ ಹೊತ್ತು
ಅಗಸೆನಾರು ಅಲ್ಲಿ ಕೊಳೆತುಹೋಗಿತ್ತು,
ಹೆಪ್ಪುಮಣ್ಣಿನ ಭಾರದಿಂದ ಜಗ್ಗಿಹೋಗಿತ್ತು.
ದಿನವೂ ಅದು ಸೂರ್ಯನ ಉರಿಯಡಿಯಲ್ಲಿ ಬೆವರುತ್ತಿತ್ತು,
ನೀರ್ಗುಳ್ಳೆಗಳು ಮೆತ್ತಗೆ ಗುಳುಗುಳಿಸುತ್ತಿದ್ದವು, ನೀಲಿನೊಣಗಳು
ಆ ಕಂಪಿನ ಸುತ್ತ ಬಲವಾದ ಸದ್ದಿನ ನವಿರುಜಾಲರಿಯನ್ನು ಹೆಣೆಯುತ್ತಿದ್ದವು.
ಅಲ್ಲಿದ್ದವು ಡ್ರ್ಯಾಗನ್‌ದುಂಬಿಗಳು, ಚುಕ್ಕೆಚಿಟ್ಟೆಗಳು,
ಆದರೆ ಎಲ್ಲಕ್ಕಿಂತ ಮೇಲಾಗಿ ದಟ್ಟವಾದ ಬೆಚ್ಚನೆಯ
ಕಪ್ಪೆಮೊಟ್ಟೆಗಳ ಜೊಲ್ಲು ಹರಡುತ್ತಿತ್ತಲ್ಲಿ ಹೆಪ್ಪುಗಟ್ಟಿದ ನೀರಿನಂತೆ
ದಡಗಳ ನೆರಳಿನಲ್ಲಿ, ಇಲ್ಲಿ, ಪ್ರತಿ ವಸಂತಮಾಸ,
ನಾನು ಜ್ಯಾಮ್ ಬಾಟ್ಲಿಗಳಲ್ಲಿ ಈ ಲೋಳೆಗಟ್ಟಿದ ಚುಕ್ಕೆಗಳನ್ನು
ತುಂಬಿಸಿ ಮನೆಯ ಜನ್ನಲಕಟ್ಟೆಗಳಲ್ಲಿ,
ಶಾಲೆಯ ಶೆಲ್ಫ್-ಗಳಲ್ಲಿ ಸಾಲಾಗಿ ನಿಲ್ಲಿಸುವೆ, ಕಾಯುವೆ
ಕಾವಲಿರುವೆ ಆ ಕೊಬ್ಬುತ್ತಿರುವ ಚುಕ್ಕೆಗಳು ಚುರುಕೀಜುವ ಗೊದಮೊಟ್ಟೆಗಳಾಗಿ
ಸ್ಫೋಟವಾಗುವ ವರೆಗೂ. ಮಿಸ್ ವಾಲ್ಸ್ ಹೇಳುವರು ನಮಗೆ
ಅಪ್ಪ-ಕಪ್ಪೆಯನ್ನು ಗೋಂಕರುಕಪ್ಪೆಯೆಂದು ಕರೆಯುತ್ತಾರೆಂದು,
ಅವನು ಹೇಗೆ ವಟಗುಟ್ಟುತ್ತಾನೆಂದು, ಮತ್ತೆ ಅಮ್ಮ-ಕಪ್ಪೆ
ನೂರಾರು ಮೊಟ್ಟೆಗಳನ್ನು ಇಡುತ್ತಾಳೆಂದು, ಇದನ್ನೆ ಕಪ್ಪೆಮೊಟ್ಟೆಗಳ
ಜೊಲ್ಲು ಎಂದನ್ನುತ್ತಾರೆಂದು.
ಕಪ್ಪೆಗಳನ್ನ ನೋಡಿ ಹವಾಮಾನ ಕೂಡ ಹೇಳಬಹುದಂತೆ
ಅವು ಬಿಸಿಲ್ಗಾಲದಲ್ಲಿ ಹಳದಿಯಾಗಿರುತ್ತವೆ,
ಮಳೆಗಾಲದಲ್ಲಿ ಕಂದಾಗಿರುತ್ತವಂತೆ.
ಮತ್ತೊಂದು ಸುಡುವ ದಿನದಂದು ಹುಲ್ಲಿನಲ್ಲಿ ಬಿದ್ದ
ಸೆಗಣಿಯಿಂದಾಗಿ ಹೊಲಗಳು ನಾರುತ್ತಿದ್ದಾಗ, ಕುಪಿತ ಕಪ್ಪೆಗಳು
ಅಗಸೆನಾರಿನಕಟ್ಟೆಗೆ ದಾಳಿಮಾಡಿದವು; ಈ ಹಿಂದೆ ಎಂದೂ ಕೇಳಿರದ
ಕರ್ಕಶ ವಟವಟಗಳ ಕೇಳಿದೆ ನಾನು
ಬೇಲಿಗಳ ಹಿಂದೆ ತಲೆಬಗ್ಗಿಸಿಕೊಂಡೆ.
ಗಾಳಿಯಲ್ಲಿ ದಟ್ಟವಾಗಿ ಹರಡಿತ್ತು ಈ ಘನ ಮೇಳದ ಸದ್ದು.
ಆ ಕಟ್ಟೆಯ ಜಾಗದಲ್ಲಿ, ಡೊಳ್ಳುಹೊಟ್ಟೆಯ ಕಪ್ಪೆಗಳು ನಿಮಿರಿ
ನಿಂತಿದ್ದವು ಹೆಪ್ಪುಮಣ್ಣಿನಲ್ಲಿ; ಅವುಗಳ ಜೋಲು ಕತ್ತುಗಳು ಬಡಿಯುತ್ತಿದ್ದವು
ದೋಣಿಹಾಯಿಗಳಂತೆ. ಕೆಲವು ಕಪ್ಪೆಗಳು ಕುಪ್ಪಳಿಸುತ್ತಿದ್ದವು:
ಆ ಅಪ್ಪಳ, ಪೊಳಪ್ ಪೊಳಪ್ ಸಪ್ಪಳ ಅಸಹ್ಯ ಬೆದರಿಕೆಗಳಂತೆ ಕೇಳಿಸಿತು.
ಕೆಲವು ಕಪ್ಪೆಗಳು ಕೂತಿದ್ದವು
ಸನ್ನದ್ಧವಾಗಿ ಮಣ್ಣುಬಾಂಬುಗಳಂತೆ, ಅವುಗಳ ಮೊಂಡು ತಲೆಗಳು ಕೆಪ್ಪೆ ಕೂಗುತ್ತಿದ್ದವು.
ನನಗೆ ವಾಂತಿ ಬಂತು, ನಾನಲ್ಲಿಂದ ತಿರುಗಿ ಓಡಿದೆ. ಆ ಭಾರಿ ಲೋಳೆ ರಾಜರು
ಸೇಡು ತೀರಿಸಿಕೊಳ್ಳುವುದಕ್ಕಾಗಿ ಸೇರಿದ್ದರು ಅಲ್ಲಿ,
ನಾನೆಲ್ಲಾದರು ಕೈ ಅದ್ದಿದ್ದರೆ
ಆ ಮೊಟ್ಟೆಜೊಲ್ಲು ನನ್ನ ಕೈಯ ಕಚ್ಚಿಕೊಳ್ಳುತಿತ್ತು
ನನಗೆ ಗೊತ್ತಿತ್ತು.
*****
No comments:
Post a Comment