ಮೂಲ: A SONG ON THE END OF THE WORLD
ಕವಿ: ಚೆಸ್‌ವಾಫ಼್ ಮಿವಾಶ್, ಪೋಲಂಡ್ CZESŁAW MIŁOSZ, Poland
Translated from the original Polish by Anthony Miłosz
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಲೋಕಾಂತ್ಯದ ಹಾಡು
ಲೋಕವು ಅಂತ್ಯವಾಗುವ ದಿನ
ದುಂಬಿಯೊಂದು ತ್ರಿದಲಪರ್ಣಿಯ ಸುತ್ತ ಹಾರುವುದು,
ಮೀನುಗಾರನೊಬ್ಬ ಹೊಳೆಯುವ ಬಲೆಯನ್ನು ಹೊಲಿಯುವನು,
ಡಾಲ್ಫಿನ್‌ಗಳು ಸಮುದ್ರದಲ್ಲಿ ಸಂತೋಷದಿಂದ ಕುಣಿದಾಡುವವು.
ಮಳೆನಳಿಗೆಯ ಬದಿಯಲ್ಲಿ ಎಳೆಯ ಗುಬ್ಬಿಗಳು ಆಟಾಡುವವು,
ಸರ್ಪದ ಚರ್ಮ ಸ್ವರ್ಣವರ್ಣದ್ದಾಗಿತ್ತು; ಎಂದೂ ಇರಬೇಕಾದಂತೆ.
ಲೋಕವು ಅಂತ್ಯವಾಗುವ ದಿನ
ಹೆಂಗಸರು ಕೊಡೆಗಳ ಹಿಡಿದು ಹೊಲಗಳ ಹಾದು ನಡೆಯುವರು,
ಕುಡುಕನೊಬ್ಬ ಮೈದಾನದ ಬದಿಯಲ್ಲಿ ತೂಕಡಿಸುವನು,
ಕಾಯಿಪಲ್ಯ ಮಾರುವವರು ಬೀದಿಯಲ್ಲಿ ಕೂಗುವರು,
ಹಳದಿಹಾಯಿಯ ದೋಣಿಯೊಂದು ದ್ವೀಪವ ಸಮೀಪಿಸುವುದು,
ಪಿಟೀಲಿನ ದ್ವನಿ ಗಾಳಿಯಲ್ಲಿ ತೇಲುತ್ತಾ
ನಕ್ಷತ್ರರಂಜಿತ ರಾತ್ರಿಯತ್ತ ಕರೆದೊಯ್ಯುವುದು.
ಗುಡುಗು ಮಿಂಚುಗಳನ್ನು ಎದುರುನೋಡಿದವರು
ನಿರಾಶರಾದರು.
ಶಕುನಗಳನ್ನು ದೇವದೂತರ ಕಹಳೆಗಳನ್ನು ಎದುರುನೋಡಿದವರು
ಇದು ಈಗ ಸಂಭವಿಸುತ್ತಿದೆಯೆಂದರೆ ನಂಬುತ್ತಿಲ್ಲ.
ಸೂರ್ಯ ಚಂದ್ರರು ಎಲ್ಲಿಯವರೆಗೆ ಆಕಾಶದಲ್ಲಿ ಇರುವರೋ,
ದುಂಬಿಯು ಎಲ್ಲಿಯವರೆಗೆ ಗುಲಾಬಿಯತ್ತ ಬರುತ್ತಲಿರುವುದೋ,
ಮುದ್ದು ಕಂದಮ್ಮಗಳು ಎಲ್ಲಿಯವರೆಗೆ ಹುಟ್ಟುತ್ತಲಿರುವವೋ,
ಇದು ಈಗ ಸಂಭವಿಸುತ್ತಿದೆಯೆಂದರೆ ಯಾರೂ ನಂಬಲ್ಲ.
ಬಳಿಗೂದಲಿನ ಮುದುಕನೊಬ್ಬನೇ, ಪ್ರವಾದಿಯಾಗಬಲ್ಲ ಅವನು,
ಆದರೆ ಪ್ರವಾದಿಯಲ್ಲ ಅವನು, ಏಕೆಂದರೆ ಬಿಡುವಿಲ್ಲದವನು ಅವನು,
ಟೊಮೇಟೋ ಗಿಡಗಳನ್ನು ಗೂಟಕ್ಕೆ ಕಟ್ಟುತ್ತಾ ಮತ್ತೆ ಮತ್ತೆ ಹೇಳುತ್ತಿದ್ದಾನೆ:
ಬೇರೆ ಅಂತ್ಯವಿರುವುದಿಲ್ಲ ಈ ಜಗತ್ತಿಗೆ,
ಬೇರೆ ಅಂತ್ಯವಿರುವುದಿಲ್ಲ ಈ ಜಗತ್ತಿಗೆ.
*****
No comments:
Post a Comment