Friday, August 7, 2020

Raatriya MaLe ರಾತ್ರಿಯ ಮಳೆ -- J. P. Clark's "Night Rain"

 ರಾತ್ರಿಯ ಮಳೆ 

ಇಂಗ್ಲಿಷ್ ಮೂಲ: Night Rain

ಕವಿ: ಜೆ. ಪಿ. ಕ್ಲಾಕ್, ನೈಜೀರಿಯಾದ ಕವಿ 

(J. P. Clark, Nigerian Poet -- John Pepper Clark-                            Bekederemo)


ರಾತ್ರಿಯ ಯಾವ ಹೊತ್ತು ಇದು ನಾನರಿಯೆ

ಸಮುದ್ರದಾಳದಿಂದ ಯಾವುದೊ ಮೀನನ್ನು 

ಮತ್ತುಣ್ಣಿಸಿ ಮೇಲೆ ಬರಿಸಿದಂತೆ,

ನಾನು ನಿದ್ದೆಯ ಹೊಳೆಯಿಂದ 

ಹೊಟ್ಟೆ ಮೇಲಾಗಿ ತೇಲಿ ಬಂದಂತೆ ಮಾತ್ರ ಅನಿಸಿತು,

ಕೋಳಿಗಳಾವೂ ಕೂಗಲಿಲ್ಲ.

ಜೋರಾಗಿ ತಾಳ ಬಡಿತಾ ಇದೆ ಇಲ್ಲಿ

ಬೇರೆ ಎಲ್ಲಾ ಕಡೆಯೂ ಹೀಗೆಯೇ ಅಂತ ಅನಿಸುತ್ತೆ

ಒಂದೇ ಸಮ ಹಠ ಹಿಡಿದು ಜೋರಾಗಿ

ನಮ್ಮ ಹುಲ್ಲು ಮಾಡಿನ ಮೇಲೆ, ಶೆಡ್ಡಿನ ಮೇಲೆ

ಮಿಂಚಿನಿಂದ ಸೀಳಿಹೋದ ಹುಲ್ಲು ಕಟ್ಟೆಗಳೋಳಗಿಂದ ತೂರಿ

ಮಬ್ಬಾಗಿ ಕಾಣಿಸುವ ಸೂರಿನ ದೂಲಗಳಿಂದ

ದೋಡ್ಡ ದೋಡ್ಡ ನೀರ  ಹನಿಗಳು ಉದುರುತ್ತಿವೆ

ಬೀಳುತ್ತಿವೆ ಕಿತ್ತಳೆ ಯಾ ಮಾವಿನ 

ಹಣ್ಣುಗಳ ತರ ಗಾಳಿಯಲ್ಲಿ ಸುರಿಯುತ್ತಿವೆ

ಅಥವಾ ಹೀಗೆ ಹೇಳಬೇಕೋ

ದಾರದಲ್ಲಿ ಪೋಣಿಸಿದ ನಾ ಹೇಳಲೆನಿಸುವ ಜಪದ 

ಮಣಿಗಳು ಒಡೆದು

ಮರದ ಯ ಮಣ್ಣಿನ ಪಾತ್ರೆಗಳಲ್ಲಿ ಬೀಳುತ್ತಿರುವಹಾಗೆ

ಅವುಗಳನ್ನು ಅಮ್ಮ ಈಗ ತರಾತುರಿಯಲ್ಲಿ

ನಮ್ಮ ಸಣ್ಣ ಕೋಣೆಯಲ್ಲಿ ನೆಲದಮೇಲೆ ಹರಡುತ್ತಾಳೆ.

ತುಂಬಾ ಕತ್ತಲಾಗಿದ್ದರೂ ಅವಳ ಪರಿಚಿತ 

ಹೆಜ್ಜೆಗಳ ನಾ ಬಲ್ಲೆ

ಡಬ್ಬಗಳನ್ನು, ಚೀಲಗಳನ್ನು, ಜಾಡಿಗಳನ್ನು

ಇರುವೆಗಳು ಮರದಿಂದ ಹೊರಗೆ ಸಾಲಾಗಿ ಬಂದು

ಚದುರಿ ಇಡೀ ನೆಲವನ್ನು ಆಕ್ರಮಿಸಿಕೊಂಡ ಹಾಗೆ

ಹರಿಯುತ್ತಿರುವ ನೀರಿನ ದಾರಿಯಿಂದ ಸರಿಸುತ್ತಿದ್ದಳು.


ಹೆದರಬೇಡಿ, ಸುಮ್ಮನೆ ತಿರುಗಿ, ಸೋದರರೇ,

ನೀವು ಮಲಗಿರುವ ಹರಿದ ಚಾಪೆಗಳ ಮಗ್ಗುಲಿಗೆ

ಇತರರು ಮಲಗಿಕೊಂಡಿರುವ ಕಡೆಗೆ ತಿರುಗಿ.

ನಾವು ಈ ರಾತ್ರಿ ಕುಡಿದ್ದಿದ್ದೇವೆ

ಹಾರಲಾಗದ ಗೂಬೆ ಬಾವಲಿಗಳ ತೊಯ್ದ

ರೆಕ್ಕೆಗಳಿಗಿಂತಲೂ ಗಾಢವಾದ ಮಾಟವ,

ನಿಂತಿವೆ ಅವು ಇರೊಕೋ ಮರದ ಮೇಲೆ ಚಂಡಿಯಾಗಿ

ಹೃದಯಗಳ ತೊರೆದು, ಆದ್ದರಿಂದ 

ಕದಲಲಾರವು ಅವು, ಇಲ್ಲ,

ಬೆಳಗಾದರೂ ಕೂಡ, ಏಕೆಂದರೆ

ಓಡೋಡಿ ಅಡಗಿಕೊಳ್ಳಬೇಕಾಗುತ್ತದೆ.

ಆದ್ದರಿಂದ, ನಾವು ಆಚೆಗೆ ಹೋರಳಿ

ನಮ್ಮ ಭೂಮಿಯ ಮೇಲೆ 

ಬಡಿಯುತ್ತಿರುವ ತಾಳಕ್ಕೆ ಓಲಾಡುವ,

ಅದರ ಅಗಲವಾದ ಹಿತವಾದ

ಸಮುದ್ರದ ಜತೆ ಬೆಸೆದ

ಕೈಯ ಕೆಳಗೆ

ನಾವು ಮುಗ್ಧ ಮುಕ್ತರ ನಿದ್ದೆ ಮಾಡೋಣ.

*****




No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...