Sunday, December 20, 2020

ಒಂದು ಕವನದ ವರ್ಣನೆ ONDU KAVANADA VARNANE - TADEUSZ RÓŻEWICZ'S "DESCRIPTION OF A POEM"

ಕವಿ: ಟಾಡೆಉಷ್ ರೂಜ಼ಾವೀಚ್ Tadeusz Różewicz, Poland

ಮೂಲ: Description of a Poem; translated from the original Polish by Adam Czerniawski

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಒಂದು ಕವನದ ವರ್ಣನೆ

ನೆನಪಿಸಿಕೊಳ್ಳಲು ಯತ್ನಿಸಿದೆ ನಾನು

ಒಂದು ಆದರ್ಶ

ಅಲಿಖಿತ

ಕವನವನ್ನು


ಇನ್ನೇನು ಹಣ್ಣಾದ

ರಾತ್ರಿಯಲ್ಲಿ ರೂಪುಗೊಂಡ

ಮುಟ್ಟಲಾಗುವಂತಹ 


ಮುಳುಗುತ್ತಿತ್ತು ಅದು

ಕರಗುತ್ತಿತ್ತು ಹಗಲ ಬೆಳಕಿನಲ್ಲಿ


ಅದು

ಇರಲಿಲ್ಲ


ಕೆಲವು ಸಲ ಅದು ನಾಲಗೆಯ

ತುದಿಯಲ್ಲಿಯೇ ಇದೇಂತ ಅನಿಸುತ್ತಿತ್ತು


ತವಕದಿಂದ

ಕೂತಿರುವೆ ನಾನು ಪೆನ್ನು ಹಿಡಿದು

ಕೈಯಲ್ಲಿ

ಕಾಯುತ್ತಾ ತಾಳ್ಮೆಯಿಂದ

ಖಾತ್ರಿಯಾಗುವವರೆಗೂ

ಅದೊಂದು ಭ್ರಮೆಯೆಂದು

ಆಗ ನಾನಲ್ಲಿಂದೆದ್ದು ನಡೆಯುವೆ


ಈ ಕವನ ಬಹುಶಃ 

ತನ್ನ ಬಗ್ಗೆಯೇ ಬರೆದ ಕವನವಿರಬೇಕು

ಒಂದು ಮುತ್ತು ಹೇಗೆ

ಮುತ್ತುಗಳ ಬಗ್ಗೆ ಮಾತಾಡುತ್ತದೆಯೋ,

ಚಿಟ್ಟೆ ಚಿಟ್ಟೆಗಳ ಬಗ್ಗೆ


ಅದೊಂದು ಪ್ರೇಮಗೀತೆಯಾಗಿರಲಿಲ್ಲ

ಶೋಕಗೀತೆಯೂ ಅಲ್ಲ

ಅದು ಮರುಗಲಿಲ್ಲ

ಹೊಗಳಲೂ ಇಲ್ಲ

ಅದು ಬಣ್ಣಿಸಲಿಲ್ಲ

ಟೀಕಿಸಲೂ ಇಲ್ಲ


ಹಗಲಲ್ಲಿ ನನ್ನ ಕೈಜಾರಿಹೋಗುತ್ತಿದ್ದ

ಆ ಕವನ

ಬಚ್ಚಿಕೊಂಡಿದೆ ತಾನು ತನ್ನೊಳಗೆನೇ


ಕೆಲವು ಸಲ ಮಾತ್ರ ಅರಿಯುತ್ತೇನೆ

ಅದರ ಕಹಿಯನ್ನು

ಅದರ ಒಳಶಾಖವನ್ನು

ಆದರೆ ನಾನದನ್ನು

ಅದರ ಕತ್ತಲ ಹಳ್ಳದಾಳದಿಂದ 

ಹೊರಗೆಳೆದು ವಾಸ್ತವದ

ದಡದ ಬಯಲಿನಲ್ಲಿ ಹಾಕುವುದಿಲ್ಲ


ಅಜಾತ

ಅದು ಅಳಿಯುತ್ತಿರುವ ಜಗತ್ತಿನ

ಶೂನ್ಯತೆಯಲ್ಲಿ

ಅಜ್ಞಾತ ವಚನಗಳನ್ನು ತುಂಬುತ್ತದೆ

***** 

 




No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...