ಮೂಲ: An African Elegy
ಕವಿ: Ben Okri ಬೆನ್ ಒಕ್ರಿ, Nigeria
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಒಂದು ಆಫ಼್ರಿಕನ್ ಶೋಕಗೀತೆ
ಕಾಲದ ಕಹಿ ಫಲದ ರುಚಿ ನಾವರಿಯಲೆಂದು
ದೇವರು ಪವಡಿಸಿದ ನಮ್ಮೆಲ್ಲರನು.
ನಾವು ಅಮೂಲ್ಯರು.
ನಮ್ಮ ಕಷ್ಟಗಳೆಲ್ಲವೂ ಒಂದು ದಿನ
ಈ ಪೃಥ್ವಿಯ ವಿಸ್ಮಯಗಳಾಗಿ ಮಾರ್ಪಡುತ್ತವೆ.
ಕೆಲ ವಿಷಯಗಳು ನನ್ನನ್ನು ಉರಿಸುತ್ತವೆ ಈಗ
ಅವು ಬಂಗಾರವಾಗುತ್ತದೆ ನನಗೆ ಖುಷಿಯಾದಾಗ.
ನಮ್ಮ ನೋವಿನ ನಿಗೂಢ ನೀವು ಕಂಡಿರಾ?
ನಾವು ಬಡತನವ ಹೊರುತ್ತಾ ಹಾಡ ಬಲ್ಲೆವು,
ಸಿಹಿ ಕನಸುಗಳ ಕಾಣಬಲ್ಲೆವು
ನಾವು ಬಿಸಿ ಗಾಳಿಯನು
ರುಚಿಯಾಗಿರುವ ಹಣ್ಣುಗಳನು
ನೀರಿನ ಮೇಲೆ ಹಿತವಾಗಿ ಪುಟಿದ ಬೆಳಕನು
ಎಂದೂ ಶಪಿಸುವುದಿಲ್ಲವಲ್ಲ?
ನಮ್ಮ ನೋವಿನಲ್ಲೂ
ನಾವು ಎಲ್ಲರನ್ನು ಹರಸುತ್ತೇವೆ
ನಾವು ಸದ್ದಿಲ್ಲದೇ ಹರಸುತ್ತೇವೆ.
ಅದಕ್ಕೇ ನಮ್ಮ ಸಂಗೀತ ಇಷ್ಟೊಂದು ಮಧುರ.
ಗಾಳಿಯೂ ಅದನ್ನು ನೆನೆಸುವಂತೆ ಮಾಡುತ್ತದೆ.
ರಹಸ್ಯ ಪವಾಡಗಳ ಕೆಲಸ ಜಾರಿಯಲ್ಲಿದೆ
ಅವು ಮಾತ್ರ ಕಾಲ ಬಂದಾಗ ಬಯಲಾಗುತ್ತದೆ.
ನಾನೂ ಕಾಲವಾದವರು ಹಾಡುವುದ ಕೇಳಿದ್ದೇನೆ.
ಅವರು ನನಗೆ ಹೇಳುತ್ತಾರೆ
ಈ ಜೀವನ ಒಳಿತೆಂದು
ಅವರು ನನಗೆ ಹೇಳುತ್ತಾರೆ
ನಯವಾಗಿ ಜೀವನ ಜೀವಿಸು
ಕೆಚ್ಚಿನಿಂದ, ಯಾವಾಗಲೂ ಆಶಾವಾದಿಯಾಗಿ.
ಇಲ್ಲಿ ಅದ್ಭುತವಿದೆ
ಆಶ್ಚರ್ಯವೂ ಇದೆ
ಎಲ್ಲಿ ಎಲ್ಲದರಲ್ಲೂಅಗೋಚರದ ಚಲನೆಯಿದೆಯೋ ಅಲ್ಲಿ.
ಕಡಲ ತುಂಬ ಹಾಡುಗಳಿವೆ.
ಆಕಾಶ ಒಬ್ಬ ಶತ್ರುವಲ್ಲ.
ವಿಧಿಯು ನಮ್ಮ ಆಪ್ತ.
*****
No comments:
Post a Comment