ಮೂಲ: GODHULI TIME
ಕವಿ: SRINIVAS RAYAPROL ಶ್ರೀನಿವಾಸ ರಾಯಪ್ರೋಲು
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಗೋಧೂಳಿಯ ಸಮಯ
ಇದು ಗೋಧೂಳಿಯ ಸಮಯ
ಈ ಮಣ್ಣಿನ ದಾರಿಯಲ್ಲಿ ನಡೆಯುತ್ತಿರಬೇಕಾದರೆ
ನನ್ನ ತಲೆಯ ಮೇಲೆ ದಟ್ಟವಾಗಿ ಕೂತಿದೆ ಹೊಗೆಯ ಮೋಡ
ಒಳಗಿನ ಸುಟ್ಟ ಹಾಲಿನ ವಾಸನೆಗಳ ಜತೆ
ಹೊರಗಿನ ಗದ್ದೆಗಳ ವಾಸನೆಗಳು ಬೆರೆಯುತ್ತವೆ
ರಸ್ತೆಯ ಮೂಲೆ ತಲುಪಿ ತಿರುಗಿದಾಗ
ಹುಲ್ಲುಕಟ್ಟೆಯ ಪಕ್ಕದಲ್ಲಿ ಕೂತಿದ್ದ
ಒಂದು ಜೋಡಿಯನ್ನು ಚಕಿತಗೊಳಿಸಿದೆ
ಇನಿಮಾತುಗಳೆಲ್ಲವನ್ನೂ ಪಿಸುಗುಟ್ಟುತಿದ್ದರವರು
ಅವಳು ನಕ್ಕು ಹಾರುವಳು
ಹಕ್ಕಿಯಂತೆ, ಅವಳ ಗೆಜ್ಜೆಗಳು
ರಿಂಗಣಿಸುತ್ತಾ, ಅವಳ ಕನ್ನಡಿ ಹೊಸೆದ ಲಂಗ ಪಟಪಟಿಸುತ್ತಾ
ಅವನಾಗ ಪೆದ್ದುಪೆದ್ದಾಗಿ ಹಲ್ಲೆಡೆಯಿಂದ
ಹುಲ್ಲುಕಡ್ಡಿಯೊಂದನ್ನು ಎಳೆಯುತ್ತಾ.
ಇದು ಗೋಧೂಳಿಯ ಸಮಯ
ಕತ್ತಲು ಇನ್ನು ಕೆಲವೇ ನಿಮಿಷಗಳ ದೂರ
ಪಶು ಪಕ್ಷಿ ಮನುಜ
ಮನೆ ಕಡೆಗೆ ಕರೆವ
ಮಿಣುಕು ದೀಪಗಳತ್ತ ತಿರುಗುವರು
ದೂರದಲ್ಲಿ ನನಗೆ ಕಾಣುತ್ತೆ
ಸರ್ರನೆ ಹಾದ ರೈಲುಗಾಡಿಯ ಬೆಳಗಿದ ಕಿಂಡಿಗಳು
ನನ್ನನ್ನು ಇಲ್ಲಿ ಕರೆತಂದ ರೈಲುಗಾಡಿ
ನನ್ನ ಯೋಚನೆಗಳು ಪಯಣಿಸುತ್ತವೆ
ನನ್ನ ಎಂದೂ ಇಲ್ಲದ ಮನೆಯತ್ತ.
*****
No comments:
Post a Comment