Friday, June 18, 2021

ಮಧ್ಯರಾತ್ರಿಯ ವೇಳೆಗೆ, ರಾತ್ರಿಯ ಮೌನದಲಿ, ನನಗೆ ಎಚ್ಚರವಾಗುತ್ತದೆ - FERNANDO PESSOA'S 'I wake up in the middle of the night and its silence'

ಮೂಲ: I wake up in the middle of the night and its silence 

ಕವಿ: FERNANDO PESSOA, Portugal ಫ಼ನಾಂಡೊ ಪೆಸೊವ, ಪೋರ್ಚುಗಲ್ 

Writing under the ‘heteronym’ Alvaro De Campos

Translated from the Portuguese into English by Richard Zenith 


ಕನ್ನಡಕ್ಕೆಎಸ್ ಜಯಶ್ರೀನಿವಾಸ ರಾವ್

 

ಮಧ್ಯರಾತ್ರಿಯ ವೇಳೆಗೆ, ರಾತ್ರಿಯ ಮೌನದಲಿ, ನನಗೆ ಎಚ್ಚರವಾಗುತ್ತದೆ

 

ಮಧ್ಯರಾತ್ರಿಯ ವೇಳೆಗೆ, ರಾತ್ರಿಯ ಮೌನದಲಿ, ನನಗೆ ಎಚ್ಚರವಾಗುತ್ತದೆ.

ನೋಡುತ್ತೇನೆ – ಟಿಕ್ ಟಾಕ್ – ಇನ್ನೂ ನಾಲ್ಕು ತಾಸುಗಳಿವೆ ಬೆಳಗಾಗುವವರೆಗೆ.

ನನ್ನ ಅನಿದ್ರೆಯ ಹತಾಶೆಯಲ್ಲಿ ಕಿಟಕಿ ಬಾಗಿಲುಗಳ ತೆರೆದು ಹಾಕುವೆ.

ರಸ್ತೆಯ ಎದುರು ಕಡೆಯಲ್ಲಿ ನಾನಾಗ ಮನುಷ್ಯನ ನೋಡುವೆ,

ಇನ್ನೊಂದು ಬೆಳಗಿದ ಕಿಟಕಿಯ ಅಡ್ಡಡ್ಡ ಗೆರೆಗಳ ಚೌಕಾಕಾರ!

ರಾತ್ರಿಯಲಿ ಸೋದರತ್ವ!

 

ಅನೈಚ್ಛಿಕ, ಗುಪ್ತ ಸೋದರತ್ವ, ರಾತ್ರಿಯಲಿ!

ನಾವಿಬ್ಬರೂ ಎಚ್ಚರವಾಗಿದ್ದೇವೆ, ಮನುಜಕುಲಕ್ಕೆ ಇದರ ಅರಿವಿಲ್ಲ.

ಅದು ಮಲಗಿದೆ. ನಮಗಿದೆ ಬೆಳಕು.

 

ಯಾರು ನೀನು?  ಖಾಯಿಲೆಯವನಾ, ನಕಲುಗಾರನಾ, ಇಲ್ಲಾ

ನನ್ನಂತಹವನೇ ಇನ್ನೊಬ್ಬ ಅನಿದ್ರೆಯವನಾ?

ಪರವಾಗಿಲ್ಲ.  ಈ ಅನಂತ, ಅನಾಕಾರ, ಅಸೀಮ ರಾತ್ರಿಯಲಿ,

ಈ ತಾಣದಲಿ, ನಮ್ಮೀ ಎರಡು ಕಿಟಕಿಗಳ ಮನುಜತ್ವ ಮಾತ್ರ,

ನಮ್ಮೀ ಎರಡು ಬೆಳಕುಗಳ ಶಾಂತ ಹೃದಯ.

ಈ ತಾಣದಲ್ಲಿ ಈ ವೇಳೆಯಲ್ಲಿ, ಅಪರಿಚಿತರು ನಾವು ಒಬ್ಬರಿಗೊಬ್ಬರು, ಜೀವಾಳವೆಲ್ಲವೂ ನಾವೇ.

ನನ್ನ ಅಪಾರ್ಟಮೆಂಟಿನ ಹಿಂಗೋಣೆಯ ಕಿಟಕಿಯ ಬಳಿ ನಿಂತು,

ಕಿಟಕಿ ಕಟ್ಟೆಯ ಮೇಲಿನ ರಾತ್ರಿಯ ತೇವವ ಅರಿಯುತ್ತಾ,

ನಾನು ಹೊರಬಾಗುತ್ತೇನೆ ಅಸೀಮದೆಡೆಗೆ, ಹಾಗೇಯೇ ಸ್ವಲ್ಪ ನನ್ನ ಕಡೆಗೂ ಕೂಡ.

 

ಈ ನೀರವ ನಿಶ್ಚಿತ ಮೌನವನ್ನು ಕಲಕಲು ಒಂದು ಹುಂಜ ಸಹ ಇಲ್ಲ!

ನೀನೇನು ಮಾಡುತ್ತಿರುವೆ, ಬೆಳಗಿದ ಕಿಟಕಿಯ ಕಾಮ್ರೇಡ್?

ನಾನು, ನನ್ನ ಅನಿದ್ರೆಯಲಿ, ಜೀವನವ ಕನಸುತ್ತಿದ್ದೇನಾ?

ನಿನ್ನ ಗುಪ್ತ ಕಿಟಕಿಯ ಗೋಲ ಹಳದಿ ಹೊಳಪು ... 

ತಮಾಷೆಯೆಂದರೆ: ನಿನ್ನಲ್ಲಿ ವಿದ್ಯುತ್ ದೀಪವಿಲ್ಲ.

ಕಳೆದುಹೋದ ಓ ನನ್ನ ಬಾಲ್ಯದ ಕೆರೊಸೀನ್ ದೀಪಗಳೇ!!

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...