Saturday, October 2, 2021

ನಿದ್ದೆಯಿಂದೆದ್ದಾಗ ಎಲ್ಲಿದ್ದೆ ನಾನು? NIDDEYINDEDDAAGA ELLIDDE NAANU? STANISLAW BARANCZAK'S "WHERE DID I WAKE UP"

ಮೂಲ: WHERE DID I WAKE UP

ಕವಿ: ಸ್ತನಿಸ್‌ಲೊ ಬರನ್‌ಚಕ್, ಪೋಲಂಡ್ STANISLAW BARANCZAK, POLAND

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ನಿದ್ದೆಯಿಂದೆದ್ದಾಗ ಎಲ್ಲಿದ್ದೆ ನಾನು? 

 

ನಿದ್ದೆಯಿಂದೆದ್ದಾಗ ಎಲ್ಲಿದ್ದೆ ನಾನು?  ಎಲ್ಲಿದ್ದೇನೆ ನಾನು?  ನನ್ನ ಬಲಬದಿ 

ಎಲ್ಲಿದೆ, ಎಲ್ಲಿದೆ ಎಡಬದಿ?  ಮೇಲೆಂಬುದು ಎಲ್ಲಿದೆ, 

ಕೆಳಗೆಂಬುದು ಎಲ್ಲಿದೆ?  ಸ್ವಲ್ಪ ಸುಧಾರಿಸಿಕೊ, ಅಂಗಾತ ಬಿದ್ದಿರೋದು

ನನ್ನ ದೇಹವದು, ನಾನು ಫೋರ್ಕ್ ಹಿಡಿಯಲು ಉಪಯೋಗಿಸುವ 

ಕೈ ಅದು, ಅಗೋ ಅಲ್ಲಿ, ನಾನು ಚೂರಿ ಹಿಡಿಯಲು,

ಕೈಕುಲುಕಲು ಉಪಯೋಗಿಸುವ ಕೈ; 

ನನ್ನ ಕೆಳಗೆ ಇವೆ ಬೆಡ್-ಶೀಟ್, ಮೆತ್ತೆ, ಮತ್ತು ನೆಲ,

ನನ್ನ ಮೇಲೆ ಇವೆ ಹೊದಿಕೆ ಮತ್ತು ಛಾವಣಿ; ನನ್ನ ಎಡಪಕ್ಕದಲ್ಲಿ

ಗೋಡೆ, ಹಾಲ್, ಬಾಗಿಲು, ಬಾಗಿಲ ಹೊರಗಿರುವ ಹಾಲಿನ ಬಾಟ್ಲಿಗಳು;

ನನ್ನ ಬಲಗಡೆ ಕಿಟಿಕಿಯೊಂದನ್ನು ಕಾಣುವೆನಾದ್ದರಿಂದ, ಅದರ ಆಚೆ ಮುಂಜಾನೆ ಇದೆ; 

ನನ್ನ ಕೆಳಗೆ ಅಂತಸ್ತುಗಳ ಅಂತರ, ನೆಲಮಾಳಿಗೆ, ಅಲ್ಲಿ ಛಳಿಗಾಲಕ್ಕಾಗಿ

ವಾಯುಭದ್ರ ಬಿಗಿಸಿದ ಜ್ಯಾಮ್ ತುಂಬಿದ ಜಾಡಿಗಳು;

ನನ್ನ ಮೇಲೆ ಮತ್ತಿತರ ಅಂತಸ್ತುಗಳು, ಅಟ್ಟ, ಹಗ್ಗದಲ್ಲಿ ಒಣಗುತ್ತಿರುವ ಬಟ್ಟೆಗಳು, 

‘ಮಾಡು, ಟೀವೀ ಆ್ಯಂಟೆನಾಗಳು; ಮತ್ತೂ ಎಡಕ್ಕೆ ಪಶ್ಚಿಮ ಬಡಾವಣೆಗಳತ್ತ ಹೋಗುವ ಬೀದಿ,

ಅದರಿಂದಲೂ ಆಚೆ ಮೈದಾನಗಳು, ರಸ್ತೆಗಳು, ಗಡಿಗಳು, ನದಿಗಳು, 

ಕಡಲ ಉಬ್ಬರವಿಳಿತಗಳು; ಬಲಗಡೆ, ಆಗಲೇ ನಸುಕಿನ ಚಿತ್ತು ಚಿತ್ತಾದ ಮಬ್ಬಿನಲಿ ತೊಯ್ದ 

ಮತ್ತಷ್ಟು ಬೀದಿಗಳು, ಮೈದಾನಗಳು, ಹೈವೇಗಳು, ನದಿಗಳು, ಗಡಿಗಳು, 

ಹೆಪ್ಪುಗಟ್ಟಿದ ಹುಲ್ಲುಗಾವಲುಗಳು, ಮತ್ತು ಹಿಮಾವೃತ ಕಾಡುಗಳು;

ನನ್ನ ಕೆಳಗೆ ತಳಪಾಯಗಳು, ಭೂಮಿ, ಧಗಧಗಿಸುವ ಕೂಪ,

ನನ್ನ ಮೇಲೆ ಮೋಡಗಳು, ಗಾಳಿ, ಬಾಡಿರುವ ಚಂದ್ರ,

ಕುಂದುವ ನಕ್ಷತ್ರಗಳು, ಹೌದು.

ನೆಮ್ಮದಿ ಈಗ,

ಮತ್ತೆ ಕಣ್ಣುಮುಚ್ಚಿಕೊಳ್ಳುತ್ತಾನೆ ಅಂವ, ಅವನ ತಲೆ ಒರಗಿದೆ

ಎಲ್ಲ ಲಂಬಗಳು ಸಮತಲಗಳು ಕೂಡುವಲ್ಲಿ,

ಸ್ಥಿರವಾಗಿ ಬಡಿಯುವ ಅವನ 

ಹೃದಯದ ಆಣಿಗಳಿಂದ 

ಪ್ರತಿಯೊಂದು ಶಿಲುಬೆಗೆ ಒಮ್ಮೆಗೇ ಜಡಿದಂತೆ.  

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...