ಮೂಲ: IF YOU INSIST ON SCREAMING, THEN DO IT QUIETLY
ಕವಿ: ಸ್ತನಿಸ್‌ಲೊ ಬರನ್‌ಚಕ್, ಪೋಲಂಡ್ STANISLAW BARANCZAK, POLAND
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
ಕಿರುಚಿಯೇ ತೀರುತ್ತೇವೆಂದು ನೀವು ಪಟ್ಟುಹಿಡಿಯುವುದಾದರೆ
ಕಿರುಚಿಯೇ ತೀರುತ್ತೇವೆಂದು ನೀವು ಪಟ್ಟುಹಿಡಿಯುವುದಾದರೆ,
ಸದ್ದಿಲ್ಲದೇ ಕಿರುಚಿ (ಗೋಡೆಗಳಿಗೆ ಕಿವಿಗಳಿವೆ)
ಪ್ರೇಮದಲ್ಲಿ ಕೂಡಿಕೊಳ್ಳುವೆವೆಂದು ನೀವು ಪಟ್ಟುಹಿಡಿಯುವುದಾದರೆ,
ದೀಪಗಳನ್ನು ಆರಿಸಿ (ಪಕ್ಕದ್ಮನೆಯವರೊಬ್ಬರ ಹತ್ತಿರ
ದುರ್ಬೀನಿದೆ)
ಇಲ್ಲಿಯೇ ವಾಸಮಾಡುತ್ತೇವೆಂದು ನೀವು ಪಟ್ಟುಹಿಡಿಯುವುದಾದರೆ,
ಬಾಗಿಲಿಗೆ ಚಿಲಕ ಹಾಕಬೇಡಿ (ಪೋಲೀಸರ ಹತ್ತಿರ
ಸರ್ಚ್ ವಾರಂಟ್ ಇದೆ)
ಯಾತನೆಪಡಲೇಬೇಕೆಂದು ನೀವು ಪಟ್ಟುಹಿಡಿಯುವುದಾದರೆ,
ನಿಮ್ಮ ಮನೆಯಲ್ಲೇ ನರಳಿ (ಬದುಕಿಗೆ ಅದರದೇ
ಹಕ್ಕುಗಳಿವೆ)
ಜೀವಿಸಲೇಬೇಕೆಂದು ನೀವು ಪಟ್ಟುಹಿಡಿಯುವುದಾದರೆ,
ಎಲ್ಲಾ ವಿಷಯಗಳಲ್ಲೂ ಮಿತಿ ಇರಲಿ (ಎಲ್ಲಕ್ಕೂ
ಅದರದರ ಮಿತಿಗಳಿವೆ)
*****
No comments:
Post a Comment