ಮೂಲ: SILENCE
ಕವಿ: ಎರಿಕ್ ಫ಼್ರೀಡ್, ಆಸ್ಟ್ರಿಯಾ ದೇಶದ ಜರ್ಮನ್ ಭಾಷಾ ಕವಿ
ERICH FRIED, GERMAN LANGUAGE POET OF AUSTRIA
Translated from the German into English by STUART HOOD
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ನಿಶ್ಶಬ್ದ
ಇಲ್ಲದ ಹಕ್ಕಿಗಳ
ಚಿಲಿಪಿಲಿಯೆ ನಿಶ್ಶಬ್ದ
ಬತ್ತಿದ ಸಾಗರದ ತೆರೆನೊರೆಗಳು
ಹಿಂದೆರೆಗಳೇ ನಿಶ್ಶಬ್ದ
ನನ್ನ ಕಣ್ಣ ಮುಂದೆ ಕತ್ತಲೆಯಲಿ
ಕಾಣುವ ಮಿಣುಕೇ ನಿಶ್ಶಬ್ದ
ನನ್ನ ಕಿವಿಯಲ್ಲಿ ನಾಟ್ಯದವರ
ತಾಳಮದ್ದಳೆಯೇ ನಿಶ್ಶಬ್ದ
ಯುದ್ಧಕಾಲದ ದಿನವೊಂದರ
ಮುಂಜಾವಿನಲ್ಲಿ
ಭಗ್ನಾವಶೇಷಗಳ
ಹೊಗೆಯ ಮಂಜಿನ ಕಂಪೇ ನಿಶ್ಶಬ್ದ
ನನ್ನ ಮತ್ತು ನನ್ನಜ್ಜಿಯ ನಡುವೆ
ಅವಳ ಶವಪೆಟ್ಟಿಗೆಯ ಬಗಲಿನಲ್ಲಿ
ಇದ್ದುದೇ ನಿಶ್ಶಬ್ದ
ನಿಶ್ಶಬ್ದ ಅವಳಾಗಿರಲಿಲ್ಲ
ಭಾಷಣಗಳ ಭರವಸೆಗಳ
ಪ್ರತಿಧ್ವನಿಯೇ ನಿಶ್ಶಬ್ದ
ಎಲ್ಲಾ ಪದಗಳ
ತಳಬಂಡೆಯೆ ನಿಶ್ಶಬ್ದ
ಚೀತ್ಕಾರಗಳ ನಂತರ
ಉಳಿದದ್ದೇ ನಿಶ್ಶಬ್ದ
ನಿಶ್ಶಬ್ದವೇ ನಿಶ್ಶಬ್ದ
ನಿಶ್ಶಬ್ದವೇ ನನ್ನ ಭವಿಷ್ಯ
*****
No comments:
Post a Comment