Saturday, April 16, 2022

ಒಗೆಯುವ ಕೆಲಸ ಮುಗಿಯುವುದೇ ಇಲ್ಲ JAAN KAPLINSKI's 'THE WASHING NEVER GETS DONE'

ಮೂಲ: THE WASHING NEVER GETS DONE

ಕವಿ: ಯಾನ್ ಕ್ಯಾಪ್ಲಿನ್ಸ್‌ಕಿ, ಎಸ್ಟೋನಿಯಾ 

JAAN KAPLINSKI, ESTONIA

Translated from the Estonian by Riina Tamm and Sam Hamill

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್


 

ಒಗೆಯುವ ಕೆಲಸ ಮುಗಿಯುವುದೇ ಇಲ್ಲ

 

ಒಗೆಯುವ ಕೆಲಸ ಮುಗಿಯುವುದೇ ಇಲ್ಲ.

ಒಲೆ ಬಿಸಿಯಾಗುವುದೇ ಇಲ್ಲ.

ಪುಸ್ತಕಗಳು ಓದದೆಯೇ ಬಿದ್ದಿವೆ.

ಬದುಕು ಪೂರ್ಣವಾಗುವುದೇ ಇಲ್ಲ.

ಬದುಕು ಒಂದು ಚೆಂಡಿನಂತೆ 

ಹಿಡಿಯುತ್ತಲಿರಬೇಕು ಹೊಡೆಯುತ್ತಲಿರಬೇಕು 

ಬೀಳದ ಹಾಗೆ ನೋಡಿಕೊಳ್ಳಬೇಕು.

ಬೇಲಿಯ ಈ ಮೂಲೆ ಮರಾಮತ್ತಾಗುತ್ತಿದ ಹಾಗೆ

ಆ ಮೂಲೆ ಕುಸಿದು ಬೀಳುತ್ತದೆ.  

ಮಾಡು ಸೋರುತಿದೆ, ಅಡಿಗೆಮನೆ ಬಾಗಿಲು ಮುಚ್ಚಲಾಗುತ್ತಿಲ್ಲ,

ಅಡಿಪಾಯದಲ್ಲಿ ಬಿರುಕುಗಳು ಕಾಣುತ್ತಿವೆ,

ಮಕ್ಕಳ ಪ್ಯಾಂಟುಗಳು ಸವೆದು ಹೋಗಿವೆ ... 

ಎಲ್ಲವನ್ನು ನೆನಪಿಟ್ಟುಕೊಳ್ಳುವುದಕ್ಕಾಗಲ್ಲ.  

ವಿಸ್ಮಯವೇನೆಂದರೆ

ಇದೆಲ್ಲದರ ಜತೆಗೆ ವಸಂತವನ್ನು ಗಮನಿಸುತ್ತೇವೆ 

ಎಲ್ಲವನ್ನು ತುಂಬಿಕೊಂಡಿದೆ

ಎಲ್ಲ ದಿಕ್ಕಿನಲ್ಲೂ ಹರಡಿದೆ – ಸಂಜೆಯ ಮೋಡಗಳಲಿ,

ರೆಡ್ವಿಂಗ್ ಹಕ್ಕಿಯ ಹಾಡಿನಲಿ, 

ಹುಲ್ಲುಗಾವಲಿನ ಒಂದೊಂದು ಹುಲ್ಲಿನ ದಳದ 

ಒಂದೊಂದು ಇಬ್ಬನಿಯ ಹನಿಯೊಳಗೆ, 

ದೃಷ್ಟಿಯ ಎಲ್ಲೆಯವರೆಗೂ, ಮುಸ್ಸಂಜೆಯೊಳಗೆ.

 

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...