Thursday, July 7, 2022

ಕಡಲ ಜಲ್ಲೆಗಳು DEREK WALCOTT'S 'SEA CANES'

ಮೂಲ ಇಂಗ್ಲಿಷ್ ಕವನSEA CANES

ಕವಿಡೆರಿಕ್ ವಾಲ್ಕಾಟ್ಸೆಂಟ್ ಲೂಸಿಯಾ

(ವೆಸ್ಟ್ ಇಂಡೀಸ್ಕರಿಬಿಯನ್)

DEREK WALCOTT, ST. LUCIA 

(WEST INDIES, THE CARIBBEAN)

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್


ಕಡಲ ಜಲ್ಲೆಗಳು

 

ನನ್ನ ಗೆಳೆಯರಲ್ಲಿ ಅರ್ಧದಷ್ಟು ಜನ ತೀರಿಹೋಗಿದ್ದಾರೆ.

ಭೂಮಿ ಹೇಳಿತು, ನಾನು ನಿನಗೆ 

ಹೊಸ ಗೆಳೆಯರನ್ನು ಮಾಡಿಕೊಡುವೆ.

ಬೇಡ, ಬದಲಾಗಿ, ತಿರುಗಿ ಕೊಡು ಅವರನ್ನು, 

ಹೇಗಿದ್ದರೋ ಹಾಗೇ, ಎಲ್ಲಾ ಲೋಪಗಳೊಂದಿಗೆ, 

ನಾನು ಅಂಗಲಾಚಿದೆ.

 

ಜಲ್ಲೆಗಳ ಮಧ್ಯೆ ನುಸುಳಿ ಬರುವ ಅಲೆನೊರೆಗಳ

ಮಂದ ಮರ್ಮರದಲ್ಲಿ ಅವರ ಮಾತಿನ ತುಣುಕುಗಳ 

ಹಿಡಿಯಬಲ್ಲೆ ನಾನು ಈ ರಾತ್ರಿ, 

ಆದರೆ ಒಬ್ಬನೆ ನಡೆಯಲಾರೆ ನಾನು

ಈ ಬೆಳದಿಂಗಳು ಬಿಂಬಿಸುವ ಕಡಲ ತೆರೆಗಳ 

ಮೇಲೆ ಆ ಬಿಳಿಯ ರಸ್ತೆಯುದ್ದಕ್ಕೂ, 

ತೇಲಾಡಲಾರೆ ನಾನು ಭೂಮಿಯ ಭಾರವ 

ತೊರೆದ ಗೂಬೆಗಳ ಸ್ವಪ್ನಭಾವದಲ್ಲಿ.

 

ಓ ಭೂಮಿಯೇ, ನಿನ್ನ ಜತೆಗಿರುವ ನನ್ನ ಗೆಳೆಯರ ಸಂಖ್ಯೆ 

ಪ್ರೀತಿಸಲು ಉಳಿದವರ ಸಂಖ್ಯೆಗಿಂತ ಹೆಚ್ಚು.

 

ಕಡಿಗಲ್ಲಿನ ಬಳಿಯಲ್ಲಿರುವ ಕಡಲಜಲ್ಲೆಗಳು 

ಹಸಿರು ಬೆಳ್ಳಿ ಬಣ್ಣಗಳ ಹೊಳಪಿಸುತ್ತವೆ;

ನನ್ನ ಆಸ್ಥೆಯ ದೇವಶೂಲಗಳಾಗಿದ್ದವು ಅವು,

 

ಆದರೆ ಏನು ಅಳಿದವೊ ಅದರಿಂದ ಮತ್ತೂ ದೃಢವಾದದ್ದು ಹುಟ್ಟುತ್ತೆ

ಅದಕ್ಕೆ ಕಲ್ಲಿನ ಯುಕ್ತ ಕಾಂತಿಯಿರುತ್ತೆ,

ಚಂದ್ರಕಾಂತಿಯನ್ನು ಸಹಿಸುತ್ತೆ, 

ಹತಾಶೆಯಿಂದ ಬಲುದೂರವಿರುತ್ತೆ,

ಗಾಳಿಯಂತೆ ಪ್ರಬಲವಾಗಿ, 

ಜಲ್ಲೆಗಳನ್ನು ಇಬ್ಭಾಗಿಸುತ್ತ ನಾವು ಪ್ರೀತಿಸುವವರನ್ನು 

ನಮ್ಮ ಮುಂದೆ ತಂದು ನಿಲ್ಲಿಸುತ್ತದೆ, 

ಹೇಗಿದ್ದರೋ ಹಾಗೇ, ಎಲ್ಲಾ ಲೋಪಗಳೊಂದಿಗೆ, 

ಹೆಚ್ಚು ಉದಾತ್ತವಾಗೇನಲ್ಲ, ಇರುವಂತೆ ಅಷ್ಡೆ. 

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...