ಇಂಗ್ಲಿಷ್ ಮೂಲ: SEA GRAPES
ಕವಿ: ಡೆರಿಕ್ ವಾಲ್ಕಾಟ್, ಸೆಂಟ್ ಲೂಸಿಯಾ
(ವೆಸ್ಟ್ ಇಂಡೀಸ್, ಕರಿಬಿಯನ್)
DEREK WALCOTT, ST. LUCIA
(WEST INDIES, THE CARIBBEAN)
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಕಡಲ್‌ದ್ರಾಕ್ಷೆಗಳು
ಬೆಳಕಿಗೆ ಒರಗಿರುವ ಹಾಯಿಪಟವೊಂದು
ದಣಿದಿದೆ ದ್ವೀಪಗಳ ಸುತ್ತಿ ಸುತ್ತಿ,
ಹಡಗೊಂದು ಧಾವಿಸುತ್ತಿದೆ ಕರಿಬಿಯನ್ ಕಡಲಿನಲ್ಲಿ
ಮನೆಯತ್ತ, ಒಡಿಸಿಯಸ್ ಇರಬಹುದೇನೋ,
ಮನೆಯಕಡೆ ಹೊರಟಿರುವನು ಏಜಿಯನ್ ಕಡಲ ದಾರಿಯಲ್ಲಿ,
ಅಪ್ಪನಿಗಾಗಿ, ಗಂಡನಿಗಾಗಿ ಕಾಯುತ್ತಿರುವ ಮನೆ,
ಒಣಗಿ ಸುಕ್ಕು ಸುಕ್ಕಾದ ಹುಳಿ ದ್ರಾಕ್ಷೆಗಳ ಅಡಿಯಲ್ಲಿ,
ಪ್ರತಿಯೊಂದು ಕಡಲ್‌ಕಾಗೆಯ ಕೀರಲಿನಲ್ಲೂ ನಾವ್ಸಿಕಾಳ
ಹೆಸರು ಕೇಳಿಸಿಕೊಳ್ಳುವ ಆ ವ್ಯಭಿಚಾರಿಯ ಹಾಗೆ;
ಇದು ಯಾರಿಗೂ ನೆಮ್ಮದಿ ತರುವುದಿಲ್ಲ. ಭ್ರಾಂತಿ ಮತ್ತು
ಕರ್ತವ್ಯದ ನಡುವಣ ಈ ಪ್ರಾಕ್ತನ ಯುದ್ಧ ಎಂದೂ
ಮುಗಿಯುವುದಿಲ್ಲ, ಸಮುದ್ರಗಳ ಸುತ್ತುವವನಿಗೂ,
ದಡದಲ್ಲಿ ಮೆಟ್ಟಿಗೆ ಕಾಲು ತೂರಿಸಿ ಮನೆಯತ್ತ ನಡೆಯುವವನಿಗೂ,
ಅದೇ ಯುದ್ಧವಿದು ಇಬ್ಬರಿಗೂ ಅಂದಿನಿಂದಲೂ, ಯಾವಾಗ ಟ್ರಾಯ್
ತನ್ನ ಹಳೆಯ ಕಾಂತಿಯನ್ನು ನಿಟ್ಟುಸಿರಿತೋ ಅಂದಿನಿಂದ,
ಯಾವಾಗ ಆ ಅಂಧ ಬಾಹುಬಲಿ ಎಸೆದ ಬಂಡೆಗಲ್ಲು
ನೆಲದ ಉಬ್ಬನ್ನು ಬಗೆದಾಗ ಉದ್ಭವಿಸಿದ ಮಹಾ ಷಟ್‌ಪಾದಿಗಳು
ಸುಸ್ತಾದ ಅಲೆನೊರೆಗಳ ಕೊನೆಗಂಡವೋ ಅಂದಿನಿಂದ.
ಗ್ರೀಕ್ ಚಿರಕೃತಿಗಳು ಸಾಂತ್ವನ ನೀಡುತ್ತವೆ, ಆದರೆ ಸಾಕಾಗಲ್ಲ.
*****
No comments:
Post a Comment