ಮೂಲ: how I know you
ಕವಿ: ಯುಜಿನಿಯಸ್ ಅಲಿಸಂಕ, ಲಿಥುವೇನಿಯಾ
EUGENIJUS ALISANKA, LITHUANIA
Translated from the Lithuanian into English by Inara Cedrins
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ನೀನಾರೆಂದು ನನಗೆ ಗೊತ್ತಾದದ್ದು ಹೀಗೆ
ಉಪ್ಪೂರಿದ ಮೀನು ಉಪ್ಪುಪ್ಪಾಗಿರುವ ಕಡಲಿನಲ್ಲಿ ಜೀವಿಸುತ್ತೆ
ಸಣ್ಣಂವನಿದ್ದಾಗ ನಾನು ಹೀಗೆ ಯೋಚಿಸುತ್ತಿದ್ದೆ
ಈಗಲೂ ನಾನು ಹೀಗೆಯೇ ಯೋಚಿಸುವೆ
ನಿನ್ನ ದೇಹ ಉಪ್ಪುಪ್ಪು, ನಿನ್ನ ಆಟಿಕೆಗಳು
ನಿನ್ನ ಮಾತುಗಳು,
ಮೂಳೆಗಳ ಮೇಲೆ ಉಪ್ಪು,
ಹಿಮದೊಳಗೆ ಉಪ್ಪು,
ದಿಂಬಿನ ಮೇಲೆ ಉಪ್ಪು,
ಚಂದ್ರಲೋಕದಲ್ಲಿರುವ ಬೆಟ್ಟಗಳು ಉಪ್ಪಿನವು
ಅವು ಹಾಲಿನ ನದಿಗಳನ್ನು ಅಡ್ಡಗಟ್ಟಿವೆ,
ಉಪ್ಪಿನ ನಾಳಗಳು ಅಗ್ನಿಪರ್ವತಗಳ
ಸ್ನಾಯುಗಳನ್ನು ಎಳೆದು ಬಿಗಿದಿವೆ,
ಉಪ್ಪಿನ ಗಣಿಗಳಲ್ಲಿ ಪ್ರಾರ್ಥಿಸಲ್ಪಡುವ ಉಪ್ಪಿನ
ದೇವರ ವಿಗ್ರಹ ಉಪ್ಪಿನಿಂದ ಮಾಡಿದವು,
ಎಂದು ಹೀಗೆಲ್ಲಾ ನಾನು ಯೋಚಿಸಿದೆ,
ಈಗಲೂ ನಾನು ಹೀಗೆಯೇ ಯೋಚಿಸುವೆ.
ಒಂದೇ ತರಹದವು ಒಂದನ್ನೊಂದು ಅರಿತುಕೊಳ್ಳುತ್ತಾವೆ.
*****
No comments:
Post a Comment