Thursday, September 8, 2022

ಲೆನಿನ್‌ಗ್ರಾಡಿಗೊಂದು ಚರಮಗೀತೆ - ANNA AKHMATOVA's 'LENINGRAD ELEGY'

ಮೂಲ: LENINGRAD ELEGY

ಕವಿ: ಅನ್ನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ಲೆನಿನ್‌ಗ್ರಾಡಿಗೊಂದು ಚರಮಗೀತೆ

 

ಈ ಅಸಭ್ಯ ಶತಮಾನ

ನನ್ನನ್ನು ಒಂದು ನದಿಯ ಹಾಗೆ ಬದಿಗೊಗೆಯಿತು.

ಈ ಅನುದ್ದಿಷ್ಟ ಬದುಕು ಈಗ

ಹೊಸ ಕಾಲುವೆಗಳಲ್ಲಿ,

ವಿಚಿತ್ರ ದಂಡೆಗಳ ಬದಿಗಳಲ್ಲಿ ಹರಿಯತೊಡಗಿದೆ.

ಯಾವ ನಿಸರ್ಗದೃಶ್ಯಗಳನ್ನು ನೋಡದೆ ಹೋದೆ?

ಯಾವ ಪರದೆಗಳು ಎದ್ದವು ಬಿದ್ದವು ನಾನಿಲ್ಲದಿದ್ದಾಗ?

ಯಾವ ಗೆಳೆಯರನ್ನು ಭೇಟಿಯಾಗದೆ ಹೋದೆ?

ನನಗೆ ಕಣ್ಣೀರು ತರಿಸಬಹುದಾದ

ಯಾವ ದಿಗಂತದೃಶ್ಯವನ್ನು ನೋಡದೆ ಹೋದೆ?

ನನಗೆ ಈ ನಗರವೊಂದೇ ಗೊತ್ತಿರುವುದು,

ನಿದ್ರೆಯಲ್ಲೂ ಮುಟ್ಟಿ ಗುರುತಿಸಬಲ್ಲೆ.

ಎಷ್ಟೊಂದು ಕವನಗಳನನ್ನು ನಾನು ಬರೆಯಲಿಲ್ಲ?

ಅವೆಲ್ಲ ನನ್ನ ಸುತ್ತ ಗಾಳಿಯಲ್ಲಿ ನೇತಾಡುತ್ತಿವೆ,

ಒಂದು ವಿಚಿತ್ರ ಮೇಳದ ಹಾಗೆ,

ಯಾವುದೋ ಒಂದು ದಿನ ನನ್ನ ಕೊರಳು ಬಿಗಿಯಬಹುದು . . .

ನನಗೆ ಗೊತ್ತಿತ್ತು ಆರಂಭಗಳು ಅಂತ್ಯಗಳು,

ಮತ್ತೆ, ಅಂತ್ಯದ ನಂತರದ ಬದುಕು, ಮತ್ತೆ ಮತ್ತೇನೋ,

ಅದರ ಬಗ್ಗೆ ನಾನು ಇನ್ನೆಂದೂ ಯೋಚಿಸಬಾರದು . . .

ಸಾಮಾನ್ಯ ಹೆಂಗಸೊಬ್ಬಳು

ನನ್ನ ವಿಶಿಷ್ಟವಾದ ಸ್ಥಾನವನ್ನು ಹಿಡಿದುಕೊಂಡಳು

ನನ್ನ ನಿಜನಾಮವನ್ನು ಉಪಯೋಗಿಸಿದಳು

ನನಗೊಂದು ಲೇಖನಾಮವನ್ನು ಬಿಟ್ಟುಹೋದಳು

ಅದರಿಂದ ನಾನು 

ನನ್ನಿಂದಾದದ್ದನ್ನು ಮಾಡುತ್ತಿದ್ದೇನೆ.

ಇದು ಘೋರ! ನನ್ನ ಸ್ವಂತ ಗೋರಿಯಲ್ಲಲ್ಲ

ನಾನು ಮಲಗುವುದು . . .

. . . . . . . . . . . . . . . . . . . . . . . . . .

ಆದರೆ, ಆಗ ನನಗೆ ನನ್ನ ಬದುಕಿನ 

‘ಈಗ’ದ ಬಗ್ಗೆ ತಿಳಿದಿದ್ದರೆ  

ಅಸೂಯೆಪಡುವುದೆಂದರೆ 

ಏನೆಂದು 

ತಿಳಿಯುತ್ತಿದ್ದೆ ...


ಲೆನಿನಗ್ರಾಡ್, ೧೯೪೪

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...