Thursday, April 15, 2021

ವಿಮಾನದಲ್ಲಿ ಸ್ವಚಿತ್ರ – ಇಕಾನಮಿ ಕ್ಲಾಸಿನಲ್ಲಿ - VIMANADALLI SWACHITRA - IKANAMI CLASSINALLI - ADAM ZAGAJEWSKI'S 'SELF-PORTRAIT IN AN AIRPLANE – IN ECONOMY CLASS'

ಮೂಲ: SELF-PORTRAIT IN AN AIRPLANE – IN ECONOMY CLASS

ಕವಿಆಡಮ್ ಜ಼ಾಗಯೆವ್‌ಸ್ಕಿ ADAM ZAGAJEWSKI, POLISH

Translated from the Polish into English by Clare Cavanagh

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್


ವಿಮಾನದಲ್ಲಿ ಸ್ವಚಿತ್ರ – ಇಕಾನಮಿ ಕ್ಲಾಸಿನಲ್ಲಿ

 

ಇಕ್ಕಟಾದ ಸೀಟಿನಲ್ಲಿ ನಜ್ಜುಗುಜ್ಜಾಗಿ,

ಭ್ರೂಣದಂತೆ ಮುದುರಿಕೂತು,

ನೆನಪಿಸಿಕೊಳ್ಳಲು ಯತ್ನಿಸಿದೆ

ಈಗಷ್ಟೇ ಕೊಯ್ದ ಒಣಹುಲ್ಲಿನ ಕಂಪನ್ನು

ಆಗಸ್ಟ್ ತಿಂಗಳಲ್ಲಿ ಗುಡ್ಡದ ಹುಲ್ಲುಗಾವಲುಗಳಿಂದ 

ಕಚ್ಛಾ ರಸ್ತೆಗಳಲ್ಲಿ ಮುಗ್ಗರಿಸುತ್ತಾ ಇಳಿದು

ಬರುವ ಮರದ ಗಾಡಿಗಳಲ್ಲಿ,

ಆಗ ಗಾಡಿ ಹೊಡೆಯುವವ ಕಿರುಚುತ್ತಾನೆ

ಕಂಗಾಲಾದ ಗಂಡಸರು ಯಾವಾಗಲೂ ಕಿರುಚುವ ಹಾಗೆ

-- ಹೋಮರ್-ನ ಈಲಿಯಡ್-ನಲ್ಲಿ ಕೂಡ ಹೀಗೇ ಕಿರುಚಿದರು

ಆಗಿನಿಂದ ಅವರುಗಳು ಮೌನವೇ ತಾಳಿಲ್ಲ,

ಧರ್ಮಯುದ್ಧದ ಕಾಲದಲ್ಲೂ ಕೂಡ,

ಅದರ ನಂತರವೂ, ಬಹಳ ಕಾಲದ ವರೆಗೂ, ನಮ್ಮ ಸಮಯದಲ್ಲೂ,

ಯಾರೂ ಕೇಳಿಸಿಕೊಳ್ಳದಿದ್ದಾಗಲೂ ಕೂಡ.

 

ನನಗೆ ಆಯಾಸವಾಗಿದೆ, ಯಾವುದನ್ನು ಆಲೋಚಿಸಲಸಾಧ್ಯವೋ

ಅದರ ಬಗ್ಗೆ ಆಲೋಚಿಸುತ್ತೇನೆ – ಹಕ್ಕಿಗಳು ಮಲಗಿದಾಗ

ಅಡವಿಯಲ್ಲಿ ವ್ಯಾಪಿಸಿದ ನಿಶ್ಶಬ್ಧದ ಬಗ್ಗೆ,

ತ್ವರದಲ್ಲೇ ಮುಗಿಯುವ ಬೇಸಿಗೆಯ ಬಗ್ಗೆ,

ನನ್ನ ತಲೆಯನ್ನು ನನ್ನ ಕೈಗಳಲ್ಲಿ ಹಿಡಿದುಕೊಳ್ಳುತ್ತೇನೆ

ನಿರ್ನಾಮದಿಂದ ಕಾಪಾಡಿಸಲೆನುವಂತೆ.

ಹೊರಗಿನಿಂದ ನೋಡಿದಾಗ ನಾನು 

ಜಡವಾಗಿ, ಬಹುತೇಕ ಸತ್ತಂತೆಯೇ, ಕಾಣಬಹುದು,

ಸೋಲನ್ನೊಪ್ಪಿಕೊಂಡವನಂತೆ, ಅನುಕಂಪಾರ್ಹನಂತೆ.

ಆದರೆ, ಹಾಗೇನೂ ಇಲ್ಲ – ನಾನು ಮುಕ್ತನಾಗಿದ್ದೇನೆ,

ಬಹುಶಃ ಸಂತೋಷವಾಗಿದ್ದೇನೆ ಕೂಡ.

ಹೌದು, ನನ್ನ ಭಾರವಾದ ತಲೆಯನ್ನು 

ನನ್ನ ಕೈಗಳಲ್ಲಿ ಹಿಡಿದುಕೊಂಡಿರುವೆ,

ಆದರೆ, ಅದರೊಳಗೆ ಒಂದು ಕವನ ಹುಟ್ಟುತ್ತಿದೆ.

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...