ಮೂಲ: Kot w pustym mieszkaniu (ಪೋಲಿಷ್)
ಕವಿ: ವೀಸ್ವಾವ ಶಿಂಬೋರ್ಸ್ಕ Wisława Szymborska, Poland
ಇಂಗ್ಲಿಷ್ ಗೆ: Stanizław Barańczak and Clare Cavanagh
CAT IN AN EMPTY APARTMENT
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಒಂದು ಖಾಲಿ ಫ಼್ಲಾಟಿನಲ್ಲಿ ಬೆಕ್ಕು
ಸಾಯುವುದು – ಒಂದು ಬೆಕ್ಕಿಗೆ ನೀನು ಹಾಗೆ ಮಾಡಬಾರದು.
ಒಂದು ಖಾಲಿ ಫ಼್ಲಾಟಿನಲ್ಲಿ ಒಂದು ಬೆಕ್ಕು
ಏನು ತಾನೆ ಮಾಡಬಲ್ಲದು?
ಗೋಡೆ ಹತ್ತುತ್ತದೆಯೇ?
ಮೆಜು ಕುರ್ಚಿಗಳಿಗೆ ಮೈಯೊರೆಸಿಕೊಳ್ಳುತ್ತದೆಯೇ?
ಇಲ್ಲಿ ಯಾವುದೂ ಬೇರೆಯಾಗಿ ಕಾಣುವುದಿಲ್ಲ,
ಆದರೆ ಯಾವುದೂ ಇದ್ದಂತೆ ಇಲ್ಲ.
ಯಾವುದನ್ನೂ ಜರುಗಿಸಿದಂತೆ ಇಲ್ಲ,
ಆದರೆ ಜಾಗ ಹೆಚ್ಚಾದಂತೆ ಇದೆ.
ಮತ್ತೆ ರಾತ್ರಿಯಲಿ ದೀಪಗಳಾವನ್ನೂ ಹೊತ್ತಿಸಲಾಗುವುದಿಲ್ಲ.
ಮೆಟ್ಟಲುಗಳ ಮೇಲೆ ಕಾಲ್ಸಪ್ಪಳ
ಆದರೆ ಅವು ಹೊಸ ಕಾಲ್ಸಪ್ಪಳ
ಸಾಸರಿನಲ್ಲಿ ಮೀನನ್ನಿಡುವ ಕೈ,
ಅದೂ ಕೂಡ ಬದಲಾಗಿದೆ.
ಯಾವುದೊಂದು ಅದರ ಎಂದಿನ
ಸಮಯಕ್ಕೆ ಶುರುವಾಗುತ್ತಿಲ್ಲ
ಯಾವುದೊಂದು ಆಗಬೇಕಾದ
ಹಾಗೆ ಆಗುತ್ತಿಲ್ಲ
ಯಾವನೊಬ್ಬ ಯಾವಾಗಲೂ, ಯಾವಾಗಲೂ ಇರುತ್ತಿದ್ದನಿಲ್ಲಿ
ಅಚಾನಕ್ಕಾಗಿ ಮಾಯವಾದನು
ಹಠಹಿಡಿದು ಮಾಯವಾಗಿಯೇ ಇದ್ದಾನೆ
ಪ್ರತಿಯೊಂದು ಬೀರೋವನ್ನು ಪರೀಕ್ಷಿಸಲಾಗಿದೆ
ಪ್ರತಿಯೊಂದು ಶೆಲ್ಫ಼ನ್ನು ಪರಿಶೀಲಿಸಲಾಗಿದೆ
ಕಾರ್ಪೆಟ್ಟಿನಡಿಯ ಪರಿಶೋಧನೆಯಲ್ಲೂ ಏನೂ ದೊರಕಿಲ್ಲ
ಕಟ್ಟಳೆಯೊಂದನ್ನು ಕೂಡ ಮುರಿಯಲಾಗಿದೆ,
ಎಲ್ಲೆಲ್ಲೂ ಚದುರಿದ ಕಾಗದ.
ಏನು ಮಾಡಲು ಉಳಿದಿದೆ ಈಗ.
ನಿದ್ರಿಸುವುದು, ಕಾಯುವುದು, ಅಷ್ಟೇ.
ಅವನು ತಿರುಗಿ ಬರುವವರೆಗೂ ಕಾಯಬೇಕು
ಅವನು ಮುಖವನ್ನೊಮ್ಮೆ ತೋರಿಸಲಿ ಸಾಕು
ಒಂದು ಬೆಕ್ಕಿಗೆ ಏನು ಮಾಡಬಾರದೆಂಬ
ಪಾಠವನ್ನೆಂದಾದರೂ ಪಡೆಯುವನೇ ಅವನು.
ಮೆಲ್ಲಗೆ ಸರಿದು ಹೋಗು ಅವನತ್ತ
ಇಷ್ಟವಿಲ್ಲದಂತೆ
ಮೆಲ್ಲ ಮೆಲ್ಲಗೆ, ಅತೀ ಮೆಲ್ಲಗೆ
ಮನನೊಂದ ಪಂಜಗಳ ಹೆಜ್ಜೆಯಿಟ್ಟು
ನೋಡು ಮತ್ತೆ, ಹಾರುವುದು, ಚೀರುವುದು,
ಕಡೇಪಕ್ಷ ಆರಂಭದಲ್ಲಿ ಬೇಡ.
*****
No comments:
Post a Comment