Wednesday, September 15, 2021

ಮರಳಿನ ಕಣವೊಂದರ ಜತೆ ನೋಟ MARALINA KANAVONDARA JATE NO:TA - WISŁAWA SZYMBORSKA'S "VIEW WITH A GRAIN OF SAND"

ಮೂಲ: VIEW WITH A GRAIN OF SAND 

ಕವಿವೀಸ್ವಾವ ಶಿಂಬೋರ್ಸ್ಕ, ಪೋಲಂಡ್ WISŁAWA SZYMBORSKA, Poland

Translated into English by Stanizław Barańczak and Clare Cavanagh

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ಮರಳಿನ ಕಣವೊಂದರ ಜತೆ ನೋಟ

 

ನಾವದನ್ನು ಮರಳಿನ ಕಣವೆಂದು ಕರೆಯುತ್ತೇವೆ

ಆದರೆ ಅದು ತನ್ನನ್ನು ಮರಳು ಯಾ ಕಣ ಎಂದು ಕರೆದುಕೊಳ್ಳುವುದಿಲ್ಲ,

ಹಾಯಾಗಿದೆ ಅದು,

ಸಾರ್ವತ್ರಿಕ, ನಿರ್ದಿಷ್ಟ,

ಶಾಶ್ವತ, ತಾತ್ಕಾಲಿಕ,

ಸರಿಯಲ್ಲದ, ಯಾ ಸೂಕ್ತವಾದ,

ಇಂತಹ ಯಾವುದೇ ಹೆಸರಿಲ್ಲದೇನೇ.

 

ನಮ್ಮ ನೋಟ, ನಮ್ಮ ಸ್ಪರ್ಶ ಅದಕ್ಕೆ ಯಾವ ಅರ್ಥವೂ ಇಲ್ಲ,

ಅದಕ್ಕೆ ತನ್ನನ್ನು ನೋಡಲಾಗಿದೆ, ಮುಟ್ಟಲಾಗಿದೆ ಎಂಬ ಅನುಭವವಿಲ್ಲ.

ಮತ್ತದು ಕಿಟಿಕಿಕಟ್ಟೆಯ ಮೇಲೆ ಬಿತ್ತೆಂಬ ವಿಷಯ

ನಮ್ಮ ಅನುಭವವಷ್ಟೇ, ಅದರದ್ದಲ್ಲ. 

ಇದರ ಮೇಲೆ ಬೀಳುವುದು ಬೇರೊಂದರ ಮೇಲೆ ಬೀಳುವುದು

ಅದಕ್ಕೆ ಈ ಅಂತರದ ಲಕ್ಷ್ಯವಿಲ್ಲ

ತಾನು ಬಿದ್ದಾಗಿದೆ ಅಥವಾ ಬೀಳುತ್ತಲೇ ಇದ್ದೇನೆ

ಎಂಬ ಭರವಸೆ ಕೂಡ ಇಲ್ಲ.

 

ಕಿಟಿಕಿಯಿಂದ ಕಾಣುತ್ತೆ ಸರೋವರದ ಅದ್ಭುತ ದೃಶ್ಯ

ಆದರೆ ಆ ದೃಶ್ಯ ತನ್ನನ್ನು ದೃಷ್ಟಿಸುತ್ತಿಲ್ಲ.  

ಅದು ಈ ಲೋಕದಲ್ಲಿ ಇದೆ

ಬಣ್ಣವಿಲ್ಲದೇ, ರೂವಿಲ್ಲದೇ,

ಶಬ್ದವಿಲ್ಲದೇ, ಕಂಪಿಲ್ಲದೇ, ನೋವಿಲ್ಲದೇ.

 

ಆ ಸರೋವರದ ತಳವಿದೆ ತಳರಹಿತವಾಗಿ

ಮತ್ತದರ ತಟವಿದೆ ತಟರಹಿತವಾಗಿ.

ಅದರ ನೀರು ಒದ್ದೆ ಯಾ ಒಣ ಎಂದು ಅದಕ್ಕೆ ಅನಿಸುವುದಿಲ್ಲ.

ಮತ್ತದರ ಅಲೆಗಳು ತಮ್ಮನ್ನು ಏಕ ಯಾ ಬಹು ಎಂದು ಕಂಡುಕೊಳ್ಳುವುದಿಲ್ಲ

ದೊಡ್ಡದಲ್ಲದ ಸಣ್ಣದಲ್ಲದ ಬೆಣಚುಕಲ್ಲುಗಳ ಮೇಲೆ

ಎರಚಾಡುತ್ತಿರುತ್ತವೆ ಅವು ತಮ್ಮ ಗದ್ದಲಕ್ಕೇ ಕಿವುಡಾಗಿ.

 

ಮತ್ತೆ ಇವೆಲ್ಲ ನಡೆಯುತ್ತಿದೆ ಸಹಜವಾಗಿ ಆಕಾಶರಹಿತವಾದ ಆ ಆಕಾಶದಡಿಯಲ್ಲಿ

ಅಲ್ಲಿ ಸೂರ್ಯ ಅಸ್ತವಾಗುತ್ತದೆ ಅಸ್ತಮಾನವಾಗದೇ

ಅಡಗದೇ ಅಡಗುತ್ತದೆ ಅದು ಲೆಕ್ಕಿಸದ ಮೋಡವೊಂದರ ಹಿಂದೆ.

ಗಾಳಿ ಅದನ್ನು ಕದಡುತ್ತದೆ, ಅದು ಬೀಸುತ್ತದೆ 

ಎಂಬ ಒಂದೇ ಕಾರಣಕ್ಕಾಗಿ ಮಾತ್ರ.

 

ಒಂದು ಕ್ಷಣ ಕಳೆಯುತ್ತದೆ

ಎರಡು ಕ್ಷಣ

ಮೂರು ಕ್ಷಣ,

ಆದರೆ ಅದು ಮೂರು ಕ್ಷಣಗಳು ಎಂಬುದು ನಮಗೆ ಮಾತ್ರ.

 

ಸಮಯ ಕಳೆದುಹೋಗಿದೆ ತುರ್ತು ಸುದ್ದಿ ತರುವ ದೂತನ ಹಾಗೆ.

ದರೆ ಅದು ನಮ್ಮ ಉಪಮೆಯಷ್ಡೇ.

ಕಲ್ಪಿತ ಪಾತ್ರ ಅವನದು, ಅವನ ತುರ್ತು ಕಾಲ್ಪನಿಕ,

ಅವನ ಸುದ್ದಿ ಅಮಾನುಷ.

 

***** 



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...