ಮೂಲ: A PEBBLE
ಕವಿ: ಯೂಲ್ಯನ್ ಕೋನ್‌ಹಾವ್ಸ(ರ್), ಪೋಲಂಡ್ JULIAN KORNHAUSER, POLAND
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಬೆಣಚುಕಲ್ಲು
ನೆನಪಿದೆಯಾ
ನಾವು ಚಿಕ್ಕವರಿದ್ದಾಗ
ಒದ್ದೆ ನಾಲಿಗೆಯ ಚಂಡಮಾರುತ
ನಮ್ಮ ತುಟಿಗಳನ್ನ ನೆಕ್ಕುತಿತ್ತು
ಕಿಲಕಿಲಿಸುವ ಉಡುಗೆ ತೊಟ್ಟ
ನೀನು ಹೊಯಿಗೆಯ ಮೇಲೆ
ಬರಿಗಾಲಲ್ಲಿ ಓಡಿದ್ದೆ
ಎಲ್ಲಾ ದಾರಿಗಳು ತೆರೆದುಕೊಳ್ಳುತ್ತಿದ್ದವು
ನಮ್ಮ ಮುಂದೆ
ಮಾಗಿದ ಹಣ್ಣುಗಳು ಬಿರಿದ ಹಾಗೆ
ಎರಡೇ ಮೆಟ್ಟಲುಗಳಿದ್ದವು
ನಮ್ಮ, ಸ್ವರ್ಗದ ಮಧ್ಯೆ
ನಾನೊಂದು ಬೆಣಚುಕಲ್ಲನ್ನು ಒದ್ದೆ
ಅದು ಹಾರಿತು ಅಗಲವಾದ ಬಿಲ್ಲಿನಾಕಾರದಲ್ಲಿ
ದೂರ
ಎತ್ತರಕ್ಕೆ
ನಮ್ಮ ದೃಷ್ಟಿಯಿಂದ ಮರೆಯಾಯಿತು ಅದು
ಮಗುವಿನ ಕೂಗೊಂದೇ
ಕೇಳಿಸಿತು
ಅದು ನೀರಿನಲ್ಲಿಯ ಲಾಳಕಡ್ಡಿ
ಉಲಿದ ಸದ್ದಾಗಿರಬಹುದು
ಈಗ ವರುಷಗಳ ನಂತರ
ಅದು ನಮ್ಮ ಕಾಲಬುಡಕ್ಕೆ ಬಂದು ಬೀಳುತ್ತೆ
ದೊಡ್ಡದಾಗಿ, ಬಂಡೆಕಲ್ಲಿನ ಹಾಗೆ
ಪಾಚಿ ಹೊಚ್ಚಿದೆ
ನಮ್ಮಿಂದ ಇನ್ನೀಗ ಅದನ್ನು ಎತ್ತಲಿಕ್ಕಾಗಲ್ಲ
ಗ್ರಹಿಸಲೂ ಅಗಲ್ಲ
No comments:
Post a Comment