Sunday, October 24, 2021

ಪದಗಳು, ಆ ಪದಗಳು PADAGALU, AA PADAGALU - HANS MAGNUS ENZENSBERGER's "THE WORDS, THE WORDS"

ಮೂಲ: THE WORDS, THE WORDS

ಕವಿ: ಹನ್ಸ ಮಾಗ್ನುಸ್ ಎನ್ಸೆನ್ಸಬsಗರ್, ಜರ್ಮನಿ

HANS MAGNUS ENZENSBERGER, GERMANY

Translated from the German by ESTHER KINSKY

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ಪದಗಳು, ಆ ಪದಗಳು

 

ನಿನ್ನನ್ನು ಹುಡುಕಿಕೊಂಡು ಬರುತ್ತಾವೆ

ನಿನಗೆ ನಿದ್ದೆ ಹತ್ತುವ ಮುಂಚೆ,

ನಿನ್ನ ಮಂಚದ ಬಳಿ ಬಂದು ಕೂರುತ್ತಾವೆ

ನೀನು ಕರೆಯದೇನೇ.

ಎಲ್ಲಿಂದ ಬರುತ್ತಾವೆ ಇವು?

ಬಂದಿರಬಹುದೋ ಇವು 

ಭೂಗತ ರೈಲುಗಳಿಂದ 

ಆಕಾಶದಿಂದ 

ಕಳೆದ ಶತಮಾನದಿಂದ?

 

ಮರ್ಮರಿಸುವ, ಗುಂಯ್‌ಗುಡುವ ಕೂಟವಿದು:

ನಿನಗೆ ಢಿಕ್ಕಿಹೊಡೆಯುತ್ತಾವೆ ತೋರ ಪದಗಳು,

ತಮ್ಮದೇ ರೂಪದ ನೆರಳುಗಳಾಗಿರುವ ಗಂಭೀರ ಪದಗಳು,

ಕಣ್‌ಸೆಳೆಯದ ಪದಗಳು

(ಓ ಸರಿ ಸರಿ, ಹೌದಾ, ಎಷ್ಟದರೂ ಅಷ್ಟೇ, ಹಾಗಾದರೆ),

ಹಲುಬುವ ಪ್ರೇತಪದಗಳು,

ಚಿಂದಿಯುಟ್ಟ ಪದಗಳು,

ಭಕ್ತಿನಿಷ್ಠ, ಅಶ್ಲೀಲ, ಕರ್ಣಕೊರೆಯುವ ಪದಗಳು – 

ಹೇಗವು ಬಯ್ಯುತ್ತಾವೆ, ಚೆಲ್ಲಾಟವಾಡುತ್ತಾವೆ, ಪಿಸುಗುಟ್ಟುತ್ತಾವೆ ನೋಡು!

 

ನಿನಗೆ ಹುಚ್ಚು ಹಿಡಿಸಲಿಕ್ಕೂ ಸಾಕು

ನಿನ್ನ ಒಳಕಿವಿಯಲ್ಲಿ ಕಿಕ್ಕಿರಿಯುತ್ತಿರುವ

ಈ ಸೊಳ್ಳೆಗಳ ಧೂಮ.

ನೀನು ಬರಿದೇ ರೊಚ್ಚಿಗೆದ್ದು ದಿಕ್ಕೆಲ್ಲ ಅರಚುವೆ,

ನಿದ್ದೆಯ ಪ್ರಶ್ನೆಯೇ ಇಲ್ಲ,

ಲೈಟಿನ ಸ್ವಿಚ್ ಆನ್ ಮಾಡು, ಎದ್ದು ನಿಲ್ಲು 

ನಿಶ್ಶಬ್ಧವ ಕಂಡು ದಿಗಿಲಾಗು!

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...