ಮೂಲ: HOMELESS POET WRITING TO HIS LOVE
ಕವಿ: ಪೀಟರ್ ಸೆಮೊಲಿಕ್, ಸ್ಲೊವೀನಿಯಾ PETER SEMOLIC, SLOVENIA
Translated from the Slovene by Ana Jelnikar
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ದಿಕ್ಕಿಲ್ಲದ ಕವಿ ತನ್ನ ಪ್ರೇಯಸಿಗೆ ಬರೆಯುತ್ತಾನೆ
ಪದಗಳ ಮನೆಯೊಂದ ಕಟ್ಟುವೆ ನಮಗಾಗಿ ನಾನು.
ನಾಮಪದಗಳೇ ಇಟ್ಟಿಗೆಗಳು
ಕ್ರಿಯಾಪದಗಳೇ ಬಾಗಿಲುಗಳು
ವಿಶೇಷಣಗಳಿಂದ ಅಲಂಕರಿಸುವೆವು ನಾವು
ಜನ್ನಲ ಕಟ್ಟೆಗಳನ್ನ
ಹೂಕುಂಡಗಳಿಟ್ಟಂತೆ.
ನಿರ್ಮಲ ನಿಶ್ಶಬ್ಧತೆಯಲ್ಲಿ ಮಲಗುವೆವು ನಾವು
ನಮ್ಮ ಪ್ರೇಮದ ಚಪ್ಪರದಡಿಯಲ್ಲಿ.
ನಿರ್ಮಲ ನಿಶ್ಶಬ್ಧತೆಯಲ್ಲಿ.
ನಮ್ಮ ಮನೆ ಬಹಳ ಸುಂದರವಾಗಿರುತ್ತೆ
ಬಹು ನಾಜೂಕಾಗಿರುತ್ತೆ, ಅದಕ್ಕೆ
ಅಪಾಯನ್ನುಂಟು ಮಾಡೆವು ನಾವು ಪದದುಬ್ಬರದಿಂದ.
ನಾವು ಮಾತಾಡುವುದಾದರೆ,
ಹೆಸರಿಡುವೆವು ನಮ್ಮ ಕಣ್ಣಿಗಷ್ಟೇ
ಕಾಣುವ ವಸ್ತುಗಳಿಗೆ.
ಯಾಕೆಂದರೆ ಒಂದೊಂದು ಕ್ರಿಯಾಪದವೂ
ಅಡಿಪಾಯವನ್ನ ಅಲ್ಲಾಡಿಸಿ
ನೆಲಸಮ ಮಾಡಬಹುದು.
ಎಂದೇ, ಸದ್ದುಬೇಡ, ನನ್ನ ಒಲವೇ,
ಸದ್ದು ಬೇಡ, ನಮ್ಮ ಮನೆಯ
ಸುಂದರ ನಾಳೆಗಾಗಿ.
*****
No comments:
Post a Comment