ಮೂಲ: THE SEA RUSTLES QUIETLY
ಕವಿ: ಹಾಸೊ ಕ್ರಲ್, ಎಸ್ಟೋನಿಯಾ HASSO KRULL, ESTONIA
Translated from the Estonian by Brandon Lussier
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
ಕಡಲು ಪ್ರಶಾಂತವಾಗಿ ಮರ್ಮರಿಸುತ್ತಿದೆ
ಕಡಲು ಪ್ರಶಾಂತವಾಗಿ ಮರ್ಮರಿಸುತ್ತಿದೆ,
ಹರಿವ ನದಿಯಂತೆ,
ಅದು ನದಿಯಲ್ಲ, ಅದು ಕಡಲು,
ದೌಡುತ್ತವೆ ಮೋಡಗಳು
ಅಡವಿಯ ಮೇಲೆ,
ಜೂನಿಪರ್ ಪೊದೆಯ ಮೇಲೆ,
ಅವು ನದಿಯಂತೆ ಹರಿಯುತ್ತವೆ,
ಆದರೆ ಅವುಗಲೋಳಗೆ ಒಂದು ತೂತಿದೆ,
ಮೋಡಗಳೊಳಗೆ ಒಂದು ತೂತಿದೆ,
ಅದರಿಂದಾಗಿ,
ಸವಿಕಂಪಿನ ಕಾಡುಗುಲಾಬಿ ಹೂಗಳು ಕಾಣಿಸುವುದು,
ಇಲ್ಲ, ಅವು ಕಾಣಿಸುವುದಿಲ್ಲ,
ನಾನು ಸುಳ್ಳು ಹೇಳಿದೆ,
ಆದರೆ ಈಗಲೂ ಕಾಡುಗುಲಾಬಿ ಹೂಬಿಡುತ್ತದೆ,
ಮೋಡಗಳು ಧಾವಿಸುತ್ತೆ,
ನನ್ನ ಜತೆ ಸೇರಿ ಸುಳ್ಳು ಹೇಳುತ್ತವೆ,
ಎಂದೇ ಭೂಮಿ ಕಪ್ಪಾಗಿದೆ,
ಎಂದೇ ಹುಲ್ಲು ಹಸಿರಾಗಿದೆ,
ಲಿಲಿ ಹೂಗಳು ಹಳದಿಯಾಗಿವೆ,
ಮೋಡಗಳು ಇವೆಲ್ಲರ ಬಗ್ಗೆ ಸುಳ್ಳಾಡುತ್ತವೆ,
ಅಂದ್ರೆ, ಸುಳ್ಳು ಹೇಳುವ ಕಲೆ ನಶಿಸಿಲ್ಲ,
ನಿಜ ಹೇಳಬೇಕೆಂದರೆ,
ಅದು ಹೊಸ ಪರಾಕಾಷ್ಠೆಗೇರಿದೆ.
ಅದು ಕಡಲನ್ನು ಘರ್ಜಿಸುವಂತೆ,
ಹಕ್ಕಿಗಳನ್ನು ಹಾಡುವಂತೆ,
ಕೆಂಪು ಪಿಯೋನಿ ಹೂಗಳನ್ನು ಅರಳುವಂತೆ ಮಾಡುತ್ತೆ,
ಕಡಲು ಪ್ರಶಾಂತವಾಗಿ ಮರ್ಮರಿಸುತ್ತೆ,
ಅದು ನದಿಯಲ್ಲ ಮತ್ತೆ,
ನದಿಯನ್ನು ಮೋಡಗಳ ಎತ್ತರಕ್ಕೆ ಏರಿಸಲಾಗಿದೆ,
ಈ ಮೋಡಗಳು ಅವುಗಳಿಂದಾದಷ್ಟು ಸುಳ್ಳಾಡುತ್ತವೆ,
ಅವುಗಳೊಳಗೆ ಒಂದು ತೂತಿದ್ದರೂ ಸಹ.
*****
No comments:
Post a Comment