ಹಿಂದಿ ಮೂಲ: ಅಲ್ವಿದಾ ಕೆಹನೆ ಕಿ ಕೋಶಿಶ್ ಮೆ अलविदा कहने की कोशिश में
ಕವಿ: ರಾಕೇಶ್ ಸುಶೀಲ್ RAKESH (MISHRA) SUSHIL
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
ವಿದಾಯ ಹೇಳುವ ಪ್ರಯತ್ನದಲ್ಲಿ
ಮಂಜು ಕವಿದಿರುವ ಕಾರಣ ಬೆಳಕು ಕಲ್ಪನೆಗೂ ಬಾರದಂತಿದೆ
ಮನೆ ಬಿಡುತ್ತಿದ್ದಂತೆ ಅಲ್ಲಿಲ್ಲಿ ಮೂಲೆಗಳಿಂದ
ವಯಸ್ಸಾದವರ ಅಳುವ ಸದ್ದು ಕೇಳಿ ಬಂತು
ರಸ್ತೆಯಲ್ಲಿ ಮಕ್ಕಳ ಕಡಿದ ಚಪ್ಪಲಿಗಳು ಕಂಡವು
ಎರಡು ಪುಟ್ಟ ಪುಟ್ಟ ಮಕ್ಕಳು ನಡೆಯುತ್ತಿದ್ದರು ಹೆದರಿದ ಹೆಜ್ಜೆಗಳನ್ನಿಡುತ್ತಾ
ಪ್ರಪಂಚದ ಅತಿ ಹತಾಶನಾದ ಮನುಷ್ಯನ ಹಿಂದೆ ಹಿಂದೆ
ತನ್ನ ಹೆಸರು ಮಾತ್ರ ಬರೆಯಲು ಗೊತ್ತಿದ್ದ ಹೆಂಗಸೊಬ್ಬಳು
ಅವಳ ಮಕ್ಕಳಿಗೆ ಗಾಳಿಯಲ್ಲಿ ಪ್ರಾರ್ಥನೆಗಳ ಬರೆಯಲು ಕಲಿಸುತ್ತಿದ್ದಳು
ನಮ್ಮ ಕೈಯಲ್ಲಿ ಜೇಬಿನಲ್ಲಿ ಏನೂ ಇರಲಿಲ್ಲ
ಉಣ್ಣಲು ಇತ್ತು ಕೆಲವು ಹಳೆಯ ನೆನಪುಗಳು
ಉಡಲು ಇತ್ತು ದುಃಖ, ಮತ್ತೆ
ಹೊದೆಯಲು ಇತ್ತು ಆಶೆಯ ಆಕಾಶ
ಒಂದುವೇಳೆ ಯಾರಾದರೂ, ಎಲ್ಲಿಗೆ ಹೋಗುತ್ತಿದ್ದೀಯಾ, ಅಂತ ಕೇಳುವುದಾದರೆ
ಉತ್ತರ ನೀಡುವೆ ಆಗ, ನಾವಲ್ಲಿಗೆ ಹೋಗುತ್ತಿದ್ದೇವೆ ಎಲ್ಲಿ ನಮಗೆ ರೊಟ್ಟಿ ಸಿಗುವುದೋ
ಆ ಜಾಗಕ್ಕೆ ಹೆಸರಾವುದೂ ಇಲ್ಲ
ಜೀವನ ನಮ್ಮ ಪಾಲಿಗೆ ಬಂತು ಯಾವುದೋ ಒಂದು ಆಕಸ್ಮಿಕದಂತೆ
ಆದರೆ ನಮ್ಮ ಶತ ಪ್ರಯತ್ನವಾಗಿತ್ತು
ನಮ್ಮ ಸಾವು ಒಂದು ಅಸಹ್ಯವಾದ ಪ್ರಹಸನವಾಗಬಾರದೆಂದು
ನಮಗೆ ಆಯಾಸವಾಗುವಂತಿಲ್ಲ
ನಾವು ನಡೆದು ಹೋಗುತ್ತಲಿರಬೇಕು ನಮ್ಮ ಪೂರ್ವಜರನ್ನು ನೆನೆಸುತ್ತಾ
ಕೊನೆಯ ಉಸಿರಿನ ತನಕ
ಸಾಯುವ ಭಯವಿರಲಿಲ್ಲ ನಮಗೆ
ನಮ್ಮ ಅತಿ ದೊಡ್ಡ ಭಯವೆಂದರೆ
ನಮ್ಮೊಳಗಿನ ವಿಸ್ಮಯದ ಪ್ರಜ್ಞೆ ಎಲ್ಲಿ ಬತ್ತಿಹೋಗುವುದೋ ಎಂದು
ನಾವು ನಡೆಯುತ್ತಿರುವ ರಸ್ತೆಯ ಅಂದ
ಅದು ಕಷ್ಟದ ರಸ್ತೆಯೆಂಬುದರಲ್ಲಿ ಇತ್ತು
No comments:
Post a Comment