ಮೂಲ: THE SAND OF TIME
ಕವಿ: ಸಾಶೊ ಸೆರಾಫಿಮೊವ್, ಬಲ್ಗೇರಿಯಾ
SASHO SERAFIMOV, BULGARIA
Translated from the Bulgarian into English by
Katerina Stoykova-Klemer
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಕಾಲದ ಮರಳು
ಇನ್ನೊಬ್ಬರ ಮಾತುಗಳನ್ನ ಆಡುವುದು ಸುಲಭ
ಇನ್ನೊಬ್ಬರ ಬಲದಿಂದ ಯುದ್ಧಮಾಡುವುದು ಸುಲಭ
ಇನ್ನೊಬ್ಬರ ದುಡ್ಡನ್ನು ಖರ್ಚು ಮಾಡುವುದು ಸುಲಭ
ನನ್ನ ಎಲ್ಲವೂ ಪಾರದರ್ಶಕ,
ಮತ್ತು ನಾನಿವತ್ತು ಹಂಚಿಕೊಳ್ಳುವ ಅನಿಸಿಕೆಗಳು
ಬಹುಶಃ ಇನ್ನೊಬರಾರೊ ಹೇಳಿರುವರು.
ಒಂದು ನೀರಹನಿ ವರ್ಣವ್ಯಾಪ್ತಿಯನ್ನು ಹೇಗೆ ಬಿಂಬಿಸುತ್ತೋ,
ಈ ಲೋಕವನ್ನು ಬಿಂಬಿಸುವಂತಹ
ಆ ಒಂದು ಪದವನ್ನು ಹೇಳಬಯಸುವೆ ನಾನು
ಒಂದು ಇರುವೆ ಮಾಡುವುದಕ್ಕಿಂತ ಹೆಚ್ಚೇನೂ ಮಾಡುವುದಿಲ್ಲ ನಾನು,
ನಡೆಯುತ್ತೆ, ಕಾಳನ್ನು ಹೊರುತ್ತೆ,
ನಾನೊಂದು ಕಾಲುವೆ ಕಂಡಾಗ –
ಅದರ ನೀರ ಕುಡಿಯುವೆ
ನಾನೊಂದು ದಾರಿ ಕಂಡುಹಿಡಿದಾಗ –
ಅಲ್ಲೊಂದು ಫಲಕ ನೆಡುವೆ
ಪರವಾಗಿಲ್ಲ ಈ ಲೋಕ ಓಡಾಡಲು ಎಂದು.
ಕಳೆದುಹೋಗುವುದು ಎಷ್ಟು ಅಪಾಯಕರವೆಂದು ಕೆಲವೊಮ್ಮೆ ಅನಿಸುತ್ತೆ.
ತಾನೆಲ್ಲಿಗೆ ಹೋಗುತ್ತಿದ್ದೇನೆಂದು
ಆ ಚಿಕ್ಕ ಹುಡುಗಿಗೆ ಸಹ ಗೊತ್ತಿರುತ್ತೆ
ಅವಳು ಅಲೆಗಳತ್ತ ಓಡುವಾಗ
ಕೈಯಲ್ಲಿ ಬಕೆಟನ್ನು ಹಿಡಿದುಕೊಂಡು.
ಗತಿಸಿದ ಕಾಲದ ಮರಳನ್ನ ಅವಳು ಒಯ್ಯುತ್ತಿದ್ದಾಳೆ
ಒಂದು ಕನಸ ಕಟ್ಟಲು.
*****
No comments:
Post a Comment