ಮೂಲ: ADHIAMBO
ಕವಿ: ಗೇಬ್ರಿಯಲ್ ಒಕಾರ, ನೈಜೀರಿಯಾ
Gabriel Okara, Nigeria
ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್
ಹಲವಾರು ದನಿಗಳು ಕೇಳಿಬರುತ್ತಿವೆ ನನಗೆ
ತಲೆಕೆಟ್ಟವನಿಗೆ ಕೇಳಿಬರುತ್ತವೆ ಅಂತಾರಲ್ಲ ಹಾಗೆ;
ಮರಗಳು ಮಾತಾಡುವುದ ಕೇಳಿಬರುತ್ತಿವೆ ನನಗೆ
ಮಂತ್ರವೈದ್ಯನಿಗೆ ಕೇಳಿಬರುತ್ತವೆ ಅಂತಾರಲ್ಲ ಹಾಗೆ.
ಇರಬಹುದೇನೊ
ನಾನೊಬ್ಬ ತಲೆಕೆಟ್ಟಂವ
ನಾನೊಬ್ಬ ಮಂತ್ರವೈದ್ಯ.
ನಾನೊಬ್ಬ ಹುಚ್ಚನೇ
ಇರಬುದೇನೊ, ಏಕೆಂದರೆ
ಆ ದನಿಗಳು ನನ್ನನ್ನು ಕರೆಯುತ್ತಿವೆ,
ಆರ್ಧರಾತ್ರಿಯ ಚಂದ್ರನೋಟದಿಂದ,
ನನ್ನ ಮೇಜಿನ ಮೌನದಿಂದ
ನನ್ನನ್ನು ಏಳೆನ್ನುತ್ತಿವೆ,
ಅಲೆತಲೆಗಳ ಮೇಲೆ ನಡೆಯುತ್ತಾ
ಸಮುದ್ರವ ದಾಟೆನ್ನುತ್ತಿವೆ.
ಇರಬಹುದೇನೊ
ನಾನೊಬ್ಬ ಮಂತ್ರವೈದ್ಯ
ಜೀವರಸಗಳ ಮಾತು ಕೇಳಿಸಿಕೊಳ್ಳುವಂವ,
ಮರಗಳ ಒಳಗೆ ನೋಡುವಂವ;
ಆದರೆ ಬಿನ್ನವಿಸುವ ಶಕ್ತಿ ಕಳಕೊಂಡಂವ.
ಆದರೆ ಆ ದನಿಗಳು ಆ ಮರಗಳು
ಈಗ ಹೆಸರಕ್ಷರಗಳಾಗಿವೆ,
ಚಂದ್ರಮುಖದ ಮೇಲೆ ಅಡ್ಡಲಾಗಿ
ಮೌನಕಡೆದ ಆಕಾರವೊಂದು
ನಡೆಯುತ್ತಿದೆ, ಭೂಖಂಡಗಳ,
ಸಮುದ್ರಗಳ ಮೇಲೆ ಕಾಲಿಡುತ್ತಾ.
ಮತ್ತೆ ನಾನು ಕೈಯೆತ್ತಿದೆ -
ನನ್ನ ನಡುಗುವ ಕೈ, ಕರವಸ್ತ್ರದಂತೆ
ಹೃದಯವನ್ನು ಬಿಗಿಹಿಡಿದು
ನಾನು ಕೈಬೀಸಿದೆ
ಮತ್ತೂ ಮತ್ತೂ ಕೈಬೀಸಿದೆ
ಆದರೆ ಅವಳು
ಮುಖ ತಿರುಗಿಸಿಬಿಟ್ಟಳು
ಆಚೆಕಡೆಗೆ.
*****
‘ಅಡ್ಹಿಯಾಂಬೊ’ ಗೇಬರ್ರಿಯಲ್ ಒಕಾರ-ರ ಮೂರನೆಯ ಹಾಗೂ ಕೊನೆಯ ಮಡದಿಯ ಹೆಸರಾಗಿತ್ತು. ಅವರ ಪೂರ್ಣ ಹೆಸರು ‘ಅಡ್ಹಿಯಾಂಬೊ ಕಾರ್ಮೈಕಲ್ ಒಕಾರ.’ ಇವರು ಆಫ಼್ರಿಕನ್-ಅಮೇರಿಕನ್ ಹಾಗೂ ಜಮೈಕಾದ ಆಫ಼್ರಿಕನ್ ಮೂಲದವರಾಗಿದ್ದರು. 1983-ರಲ್ಲಿ ಇವರು ನೈಜೀರಿಯಾದಲ್ಲಿ ನಿಧನರಾದರು.
‘ಅಡ್ಹಿಯಾಂಬೊ’ ಪದದ ಅರ್ಥವೇನು ಅಂತ ಹುಡುಕಿದಾಗ ‘ಸುರ್ಯಾಸ್ತದ ನಂತರ ಹುಟ್ಟಿದ; ಸಾಯಂಕಾಲ ಹುಟ್ಟಿದ’ ಅಂತ ತಿಳಿದು ಬಂತು. ಈ ಪದವನ್ನು ಆಫ್ರಿಕಾದಲ್ಲಿ ಹೆಣ್ಣುಮಕ್ಕಳಿಗೆ ಹೆಸರಾಗಿ ಇಡುತ್ತಾರೆ. ಈ ಪದದ ಮೂಲ ಯಾವ ಆಫ಼್ರಿಕನ್ ದೇಶದ್ದು ಅಥವಾ ಪಂಗಡದ್ದು ಅಂತ ಸರಿಯಾಗಿ ಗೊತ್ತಾಗಲಿಲ್ಲ.
No comments:
Post a Comment