Friday, August 19, 2022

ಮಾಂತ್ರಿಕ ದುಡಿ - GABRIEL OKARA'S 'THE MYSTIC DRUM'

ಮೂಲTHE MYSTIC DRUM

ಕವಿಗೇಬ್ರಿಯಲ್ ಒಕಾರ, ನೈಜೀರಿಯಾ

GABRIEL OKARA, Nigeria

ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್

 


ಮಾಂತ್ರಿಕ ದುಡಿ

 

ಬಡಿಯುತ್ತಿತ್ತು ನನ್ನೊಳಗೆ ಮಾಂತ್ರಿಕ ದುಡಿಯೊಂದು 

ಕುಣಿಯುತ್ತಿದ್ದವು ಮೀನುಗಳು ನದಿಗಳಲ್ಲಿ 

ನಲಿಯುತ್ತಿದ್ದರು ಗಂಡಸರು ಹೆಂಗಸರು ದಡದಲ್ಲಿ

ನನ್ನ ದುಡಿಯ ಲಯಕ್ಕೆ 

 

ಆದರೆ ಮರದ ಹಿಂದೆ ನಿಂತಿದ್ದ ಅವಳು

ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು

ತಲೆಯಾಡಿಸಿ ನಕ್ಕಳಷ್ಡೇ ಅವಳು 

 

ನನ್ನ ದುಡಿ ಬಡಿಯುತ್ತಲೇ ಇತ್ತು

ತಾಳದ ಗತಿ ಹೆಚ್ಚಿಸುತ್ತಾ 

ಗಾಳಿಯಲ್ಲಿ ಅಲೆಗಳನ್ನೆಬ್ಬಿಸುತ್ತಾ

ಬದುಕಿರುವವರನ್ನು ಸತ್ತವರನ್ನು

ಅವರವರ ನೆರಳುಗಳ ಜತೆ 

ಹಾಡಲು ಕುಣಿಯಲು ಒತ್ತಾಯಿಸುತ್ತಾ –

 

ಆದರೆ ಮರದ ಹಿಂದೆ ನಿಂತಿದ್ದ ಅವಳು

ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು

ತಲೆಯಾಡಿಸಿ ನಕ್ಕಳಷ್ಡೇ ಅವಳು 

 

ನೆಲದ ವಸ್ತುಗಳ ಲಯಕ್ಕೆ

ದುಡಿಯು ಬಡಿಯ ತೊಡಗಿತು

ಕಾಶದ ಅಕ್ಷವನ್ನು, ಸೂರ್ಯ,

ಚಂದ್ರ, ನದಿ ದೇವತೆಗಳನ್ನು ಆವಾಹಿಸಿತು -

ಮರಗಳು ಕುಣಿಯ ತೊಡಗಿದವು

 

ಮೀನುಗಳು ಮನುಜರಾದರು

ಮನುಜರು ಮೀನುಗಳಾದರು

ಎಲ್ಲವೂ ಬೆಳೆಯುವುದ ನಿಂತಿತು –

 

ಆದರೆ ಮರದ ಹಿಂದೆ ನಿಂತಿದ್ದ ಅವಳು

ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು

ತಲೆಯಾಡಿಸಿ ನಕ್ಕಳಷ್ಡೇ ಅವಳು

 

ಗ ನನ್ನೊಳಗಿನ ಮಾಂತ್ರಿಕ ದುಡಿ

ಬಡಿಯುವುದ ನಿಲ್ಲಿಸಿತು –

ಮನುಜರು ಮನುಜರಾದರು

ಮೀನುಗಳು ಮೀನುಗಳಾದವು

ಮರಗಳು, ಸೂರ್ಯ, ಚಂದ್ರ

ಅವರವರ ಜಾಗ ಸೇರಿದವು, 

ಸತ್ತವರು ನೆಲ ಸೇರಿದರು

ಎಲ್ಲವೂ ಮತ್ತೆ ಬೆಳೆಯತೊಡಗಿದವು

 

ಮತ್ತೆ ಮರದ ಹಿಂದೆ ನಿಂತಿದ್ದ ಅವಳು

ಬೇರುಗಳು ಮೊಳೆತವು ಅವಳ ಪಾದಗಳಿಂದ

ಎಲೆಗಳು ಚಿಗುರಿದವು ಅವಳ ತಲೆಯಿಂದ

ಹೊಗೆ ಹೊಮ್ಮಿತು ಅವಳ ಮೂಗಿನಿಂದ 

ಅವಳ ತುಟಿಗಳು ಬಿರಿದವು

ಅವಳ ನಗೆ ಮಾರಿತು 

ಕತ್ತಲೆ ಕಾರುವ ಕುಳಿಯಾಗಿ.

 

ಆಗ, ಆಗ ನಾನು ನನ್ನ ಮಾಂತ್ರಿಕ ದುಡಿಯನ್ನ

ಚಿಲದಲ್ಲಿಟ್ಟು ತಿರುಗಿ ನಡೆದೆ;

ಮತ್ತೆಂದೂ ಬಾರಿಸಲಿಲ್ಲ ಇಷ್ಟೊಂದು ಜೋರಾಗಿ ದುಡಿಯನ್ನು.


*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...