ಒಂದು ಕಲ್ಲುಬಂಡೆಯ ಜತೆ ಸಂಭಾಷಣೆ
ಮೂಲ: Rozmowa z Kamieniem (ಪೋಲಿಷ್)
ಕವಿ: ವೀಸ್ವಾವ ಶಿಂಬೋರ್ಸ್ಕ Wisława Szymborska, Poland
ಇಂಗ್ಲಿಷ್ ಗೆ: Stanizław Barańczak and Clare Cavanagh
Conversation with a Stone
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
--
ನಾನು ಕಲ್ಲುಬಂಡೆಯ ಮುಂಬಾಗಿಲ ತಟ್ಟುವೆ.
"ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ನಾ ನಿನ್ನೊಳಗೆ ಬರಲಿಚ್ಛಿಸುವೆ,
ಸುತ್ತಲೂ ನೋಡುವೆ,
ನನ್ನುಸಿರಲ್ಲಿ ನಿನ್ನನ್ನು ತುಂಬಿಕೊಳ್ಳುವೆ."
"ಹೋಗಾಚೆಗೆ," ಹೇಳುತ್ತೆ ಕಲ್ಲು.
"ನಾನು ಗಟ್ಟಿಯಾಗಿ ಮುಚ್ಚಲ್ಪಟ್ಟಿರುವೆ.
ನನ್ನನ್ನು ತುಂಡು ತುಂಡಾಗಿ ಒಡೆದರೂ,
ನಾವೆಲ್ಲರೂ ಮುಚ್ಚಿಯೇ ಇರುವೆವು.
ನಮ್ಮನ್ನು ಪುಡಿ ಪುಡಿಮಾಡಿ ಮರಳಾಗಿಸಿದರೂ ಸಹ
ನಾವು ನಿನ್ನನ್ನು ಒಳಗೆ ಬರಲು ಬಿಡುವುದಿಲ್ಲ."
ನಾನು ಕಲ್ಲುಬಂಡೆಯ ಮುಂಬಾಗಿಲ ತಟ್ಟುವೆ.
"ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ನಾನು ಬರೀ ಕುತೂಹಲದಿಂದಷ್ಟೇ ಬಂದಿರುವೆ.
ಉಸಿರು ಮಾತ್ರ ಅದನ್ನು ತಣಿಸಬಲ್ಲದು.
ನಿನ್ನರಮನೆಯಲ್ಲಿ ಅಡ್ಡಾಡಬೇಕೆಂದಿರುವೆ,
ನಂತರ ಒಂದು ಎಲೆಯನ್ನು ಭೇಟಿ ಮಾಡುವೆ, ಒಂದು ನೀರ ಹನಿಯನ್ನು.
ನನ್ನಲ್ಲಿ ಹೆಚ್ಚು ಸಮಯವಿಲ್ಲ.
ನನ್ನ ನಶ್ವರತೆಯಾದರೂ ನಿನ್ನನ್ನು ತಟ್ಟಬೇಕು."
"ನಾನು ಕಲ್ಲಿನಿಂದ ಮಾಡಲ್ಪಟ್ಟಿರುವೆ," ಹೇಳಿತು ಕಲ್ಲು,
ಆದ್ದರಿಂದ ಬಿಗುಮುಖಿಯಾಗಿಯೇ ಇರಬೇಕು.
ಹೋಗಾಚೆಗೆ.
ನಗಲು ಸ್ನಾಯುಗಳಿಲ್ಲ ನನ್ನಲ್ಲಿ."
ನಾನು ಕಲ್ಲುಬಂಡೆಯ ಮುಂಬಾಗಿಲ ತಟ್ಟುವೆ
"ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ನಿನ್ನೊಳಗೆ ವಿಶಾಲವಾದ ಖಾಲಿ ಹಜಾರಗಳಿವೆಯೆಂದು ಕೇಳಿರುವೆ,
ಕಾಣದವು, ವ್ಯರ್ಥ ಅವುಗಳ ಸೌಂದರ್ಯ,
ಶಬ್ಧರಹಿತ, ಯಾರ ಹೆಜ್ಜೆಗಳೂ ಮಾರ್ದನಿಸವು.
ಒಪ್ಪಿಕೋ, ನಿನಗೂ ಅವುಗಳ ಬಗ್ಗೆ ಹೆಚ್ಚೇನೂ ಗೊತ್ತಿಲ್ಲಾಂತ."
"ವಿಶಾಲವೂ, ಖಾಲಿಯೂ, ನಿಜವೇ," ಹೇಳಿತು ಕಲ್ಲು,
"ಆದರೆ ಅಲ್ಲಿ ಜಾಗ ಇಲ್ಲ.
ಸುಂದರ, ಇರಬಹುದು, ಆದರೆ ಆ ಸೌಂದರ್ಯ ನಿನ್ನ ಬಡ ಬುದ್ಧಿಗೆ ಎಟುಕದು.
ನನ್ನ ಪರಿಚಯವಾಗಬಹುದು ನಿನಗೆ, ಆದರೆ ನನ್ನನ್ನು ಎಂದೂ ಅರಿಯಲಾರೆ.
ನನ್ನ ಹೊರಮೈ ನಿನ್ನತ್ತ ತಿರುಗಿದೆ,
ನನ್ನೆಲ್ಲ ಆಂತರ್ಯಗಳು ಒಳ ತಿರುಗಿವೆ."
ನಾನು ಕಲ್ಲು ಬಂಡೆಯ ಮುಂಬಾಗಿಲ ತಟ್ಟುವೆ.
"ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ಅನಂತ ಆಶ್ರಯ ಅರಸಿ ಬಂದಿಲ್ಲ.
ನಾನು ಅಸಂತುಷ್ಟನಲ್ಲ.
ನಾನು ನಿರ್ಗತಿಕನಲ್ಲ.
ತಿರುಗಿ ಹೋಗಲು ಯೋಗ್ಯವಾದದ್ದೆ ನನ್ನ ಲೋಕ.
ನಾನು ಬರಿಗೈಯಲ್ಲಿ ಬರುವೆ ಹೋಗುವೆ.
ಮತ್ತೆ, ನಾನು ಅಲ್ಲಿದ್ದೆ ಎಂಬುದಕ್ಕೆ ಪುರಾವೆ
ನನ್ನ ಮಾತುಗಳು ಮಾತ್ರ,
ಅವುಗಳನು ಹೇಗೂ ಯಾರೂ ನಂಬರು."
"ನಿನಗೆ ಒಳಗೆ ಪ್ರವೇಶವಿಲ್ಲ," ಎಂದಿತು ಕಲ್ಲು.
"ನಿನ್ನಲ್ಲಿ ಪಾಲುಗೊಳ್ಳುವಿಕೆಯ ಅರಿವಿಲ್ಲ.
ನಿನ್ನಲ್ಲಿರದ ಪಾಲುಗೊಳ್ಳುವಿಕೆಯ ಅರಿವನ್ನು ಬೇರೆ ಯಾವ ಅರಿವೂ ತುಂಬಲಾರದು.
ನಿನ್ನ ದೃಷ್ಟಿಗೆ ಎಲ್ಲವನ್ನೂ ಕಾಣುವ ಶಕ್ತಿ ದೊರಕಿದರೂ ಪಾಲುಗೊಳ್ಳುವಿಕೆಯ ಅರಿವಿಲ್ಲವಾದ್ದರಿಂದ ಕೆಲಸಕ್ಕೆ ಬಾರದು.
ನೀ ಒಳಗೆ ಬರಲಾರೆ, ನಿನಗೆ ಆ ಅರಿವು ಹೇಗಿರಬಹುದೆಂಬ ಅರಿವು ಮಾತ್ರ ಇದೆ,
ಅದರ ಬೀಜ, ಕಲ್ಪನೆ ಮಾತ್ರ."
ನಾನು ಕಲ್ಲು ಬಂಡೆಯ ಮುಂಬಾಗಿಲ ತಟ್ಟುವೆ.
"ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ನನ್ಹತ್ರ ಎರಡು ಸಾವಿರ ಶತಮಾನಗಳಿಲ್ಲ,
ಆದ್ದರಿಂದ, ನಿನ್ನ ಸೂರಿನಡಿಯಲ್ಲಿ ಬರಲು ಬಿಡು."
"ನನ್ನನ್ನು ನಂಬುವುದಿಲ್ಲವಾದರೆ," ಕಲ್ಲು ಹೇಳಿತ್ತು,
"ಆ ಎಲೆಯನ್ನು ಕೇಳು, ಅದೂ ಇದನ್ನೆ ಹೇಳುತ್ತೆ.
ನೀರ ಹನಿಯನ್ನು ಕೇಳು, ಎಲೆ ಹೇಳಿದ್ದನ್ನೇ ಅದೂ ಹೇಳುತ್ತೆ.
ಕೊನೆಗೆ, ನಿನ್ನದೇ ತಲೆಯ ಒಂದು ಕೂದಲನ್ನು ಕೇಳು.
ನನಗೆ ಹೊಟ್ಟೆ ಬಿರಿಯ ನಗು ಬರುತಿದೆ, ಹೌದು, ನಗೆ, ವಿಶಾಲವಾದ ನಗೆ,
ಆದರೆ ಹೇಗೆ ನಗಬೇಕೆಂದು ನನಗೆ ಗೊತ್ತಿಲ್ಲ."
ನಾನು ಕಲ್ಲು ಬಂಡೆಯ ಮುಂಬಾಗಿಲ ತಟ್ಟುವೆ.
"ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
"ನನ್ನಲ್ಲಿ ಬಾಗಿಲಿಲ್ಲ," ಹೇಳಿತು ಕಲ್ಲು.
*****

'Conversation with a Stone'
Jake Weigel
(Charcoal and dry pigment on Hosho paper, drypoint 2011)(https://jakeweigel.net/conversation-with-a-stone-17/)