ಮೂಲ: TO DEATH: REQUIEM Poem 8
ಕವಿ: ಅನಾ ಅಖ್ಮತೊವಾ, ರಶಿಯಾ
ANNA AKHMATOVA, RUSSIA
Translated from the Russian by
Lenore Mayhew and William McNaughton
(ANNA AKHMATOVA: POEM WITHOUT A HERO
AND SELECTED POEMS )
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಮೃತ್ಯುವಿಗೆ
ರೆಕ್ವಿಯೆಮ್ ೮
ಹೇಗೂ ನೀನು ಬಂದೇ ಬರುತ್ತಿ, ಈಗಲೇ ಯಾಕೆ ಬರಬಾರದು?
ನಿನಗಾಗಿ ಕಾಯುತ್ತಿದ್ದೇನೆ ನಾನು – ಕಷ್ಟದ ಬದುಕು ನನ್ನದು.
ನಾನು ದೀಪ ಆರಿಸಿ ನಿನಗಾಗಿ ಬಾಗಿಲು ತೆರೆದಿಡುವೆ.
ಎಷ್ಟು ಸರಳವಾಗಿರುವೆ ನೀನು, ಎಂತ ಪವಾಡವಿದು!
ನಿನಗಿಷ್ಟವಾದ ಮುಖವಾಡ ಹಾಕಿಕೊ,
ಛೇದಿಸಿ ನುಗ್ಗು ವಿಷಮಯ ಸಿಡಿಗುಂಡಿನಂತೆ,
ಇಲ್ಲಾ ಎಚ್ಚರಿಕೆಯಿಂದ ಬಾ, ನುರಿತ ಕಳ್ಳನಂತೆ,
ಇಲ್ಲಾ ಟೊಯ್‌ಫಸ್ ಜ್ವರದಿಂದ ಸನ್ನಿಹಿಡಿದವನಂತೆ ಬಾ,
ಇಲ್ಲಾ ಯಾವುದರ ಬಗ್ಗೆ ಕೇಳಿ ಕೇಳಿ ಸಾಕಾಗಿದ್ದೇವೋ,
ನೀನೇ ಸೃಷ್ಟಿಸಿಕೊಂಡ ಆ ನಿನ್ನ ಬೃಹತ್-ರೂಪದಂತೆ ಬಾ,
ಎಲ್ಲಿ ನಿನ್ನ ನೀಲಿ ಟೋಪಿಯ ಅಂಚು ನೋಡೋಣ,
ನೋಡು, ಆ ಚೌಕಿದಾರ ಹೆದರಿ ಬಿಳಿಚಿಹೋಗಿದ್ದಾನೆ.
ಈಗ ನನಗೆ ಎಲ್ಲಾ ಒಂದೇ.
ಎನಿಸೇಯಿ ನದಿ ತಿರುವುತಿದೆ, ಧ್ರುವತಾರೆ ಹೊಳೆಯುತಿದೆ,
ಅವನ ಕಂಗಳ ಕಡುನೀಲಿ ಕಾಂತಿಗೆ
ಅಂತಿಮ ಭೀತಿಯ ಚಾದರ ಹೊದ್ದಿದೆ.
ಆಗಸ್ಟ್ 19, 1939 ಫೌಂಟನ್ ಹೌಸ್
*****