Wednesday, March 23, 2022

ತವರದ ತಟ್ಟೆ - HANS MAGNUS ENZENSBERGER's "THE TIN PLATE"

ಮೂಲTHE TIN PLATE

ಕವಿಹನ್ಸ ಮಾಗ್ನುಸ್ ಎನ್ಸೆನ್ಸಬsಗರ್ಜರ್ಮನಿ

HANS MAGNUS ENZENSBERGER, GERMANY

Translated from the German by 

HANS MAGNUS ENZENSBERGER

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ತವರದ ತಟ್ಟೆ

 

ದಾರಿದ್ರ್ಯದ ಬಗ್ಗೆ ಹೇಳುವುದೆಲ್ಲವ ಹೇಳಿಯಾಗಿದೆ:

ಅದು ಜಗ್ಗದು, ಜಿಗುಟಿನದು, ಪಟ್ಟುಬಿಡದು ಎಂದು, 

ಮತ್ತೆ ಯಾರಿಗೂ ಆಸಕ್ತಿ ಇಲ್ಲದಂತಹದ್ದು

ಬಡವರ ಹೊರತು.  ಅದು ಬೋರ್ ಹೊಡೆಸುತ್ತೆ.

ಅದಕ್ಕೆ ಚಿಂತೆ ಮಾಡಲು ಬೇಕಾದಷ್ಟಿದೆ 

ಬೋರ್ ಹೊಡೆಯುವುದರ ಬಗ್ಗೆ ದೂರಲು.

ಕೋಳೆ ಹೇಗೋ, ಹಾಗೆ ಅದೂ ಬಹಳ 

ಆಳದಲ್ಲಿ ಕಂಡುಬರುತ್ತೆ.  ಅದು ಅಂಟುರೋಗದಂತೆ, 

ಅದು ನಾರುತ್ತೆ, ಅದೊಂದು ಪೀಡೆ.

 

ಅದರ ಸರ್ವವ್ಯಾಪಿತ್ವ ಕಣ್ಸೆಳೆಯುವಂತಹದ್ದು.

ಅದು ಅನಂತತೆಯಿಂದ ಪಾಲು ಪಡಕೊಂಡಂತೆ ಅನಿಸುತ್ತೆ.

ಅದರ ಗುಣಲಕ್ಷಣಗಳು ದಿವ್ಯ.

ಸೇವಕರು, ಸಂತರು ಅದನ್ನು ಕೋರುತ್ತಾರೆ.

ಸನ್ಯಾಸಿ ಸನ್ಯಾಸಿನಿಯರ ಲಗ್ನ ನಿಶ್ಚಯವಾಗಿವೆ ಅದರ ಜತೆ.

ಳಿದ ನಮ್ಮಂತವರನ್ನ ನೋಡಿದರೆ, 

ನಮ್ಮೆಲ್ಲರ ಬದುಕುಗಳು ಓಡುತ್ತಿವೆ ತಪ್ಪಿಸಿಕೊಂಡು, 

ಮುಂದಿನ ಬೀದಿ ತಿರುವಿನಲ್ಲಿ 

ದಾರಿದ್ರ್ಯ ನಮ್ಮನ್ನ ಹಿಡಕೊಳ್ಳುತ್ತೆ.

 

ನಿರ್ಭಾವ, ಅಚಲ, ಭವ್ಯ,

ಹಿಡಕೊಂಡು ಕೈಯಲ್ಲಿ ತವರದ ತಟ್ಟೆ.

 

*****



ವೃದ್ಧಾಶ್ರಮ - RAINER BRAMBACH's "OLD PEOPLE’S HOME"

ಮೂಲ: OLD PEOPLE’S HOME  

ಕವಿ: ರಾಯ್ನರ್ ಬ್ರಾಮ್‌ಬಾಖ್ (1917-1983)

ಸ್ವಿಟ್ಜರ್‌ಲೆಂಡ್‌ನ ಜರ್ಮನ್ ಭಾಷಾ ಕವಿ

RAINER BRAMBACH (1917-1983), 

German language poet from SWITZERLAND

Translated into English by ESTHER KINSKY

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ವೃದ್ಧಾಶ್ರಮ

 

ತೋಟಗಾರನ ನಿವೃತ್ತ ಜೀವನ ನಡೆಸುತ್ತಿರುವೆನಾದರೂ 

ನನಗೀಗಲೂ ನೆನಪಿದೆ

ಅಷ್ಟಮಾರುತಗಳ್ಳೆವುದರ ವೇಳಾಪಟ್ಟಿ.

ಮಳೆಮೋಡಗಳ ಆಗಮನದ ಸಮಯದ ಬಗ್ಗೆ

ನಾನು ನೀಡುವ ಮುನ್ಸೂಚನೆಗಳು

ನಂಬುವಂತಹವು.

 

ಸಂಧಿವಾತ ಮತ್ತು ಬ್ರ್ಯಾಂಡಿಗಾಗಿ ಇರುವ

ತಣಿಸಲಾಗದ ಕಡುಬಯಕೆಯನ್ನು ಬಿಟ್ಟರೆ 

ನನಗೆ ಬೇರಾವ ಸಮಸ್ಯೆಗಳಿಲ್ಲ. 

ನನ್ನ ಮಿತ್ರರೆಲ್ಲರೂ ಸತ್ತುಹೋಗಿದ್ದಾರೆ

ನನ್ನ ಶತ್ರುಗಳೆಲ್ಲರೂ ಕಾಣೆಯಾಗಿದ್ದಾರೆ.

 

ನನಗೆ ಗೀಗ ಅರ್ಥವಾಗದ ಈ ಲೋಕ

ವಾರ್ತಾಪತ್ರಿಕೆಯ ರೂಪದಲ್ಲಿ ವಾರಕ್ಕೊಮ್ಮೆ

ನನ್ನನ್ನು ಭೇಟಿ ಮಾಡುತ್ತೆ

ಮತ್ತೆ ದಿನಕ್ಕೆ ಹಲವು ಸಲ

ಗುಬ್ಬಚ್ಚಿಗಳ ಹಿಂಡೊಂದು ಪಟಪಟನೆ 

ಹಾರಿ ಬರುತ್ತವೆ ಕಿಟಕಿಯ ಹತ್ತಿರ.

 

ಗುಬ್ಬಚ್ಚಿಗಳು ನನ್ನಲ್ಲಿಟ್ಟ ನಂಬಿಕೆಯನ್ನು ಮನ್ನಿಸಿ

ನಾನವುಗಳನ್ನು ಹಾಡುಹಕ್ಕಿಗಳ ಮಟ್ಟಕ್ಕೆ ಏರಿಸಿರುವೆ.

 

*****


ನದಿಯ ಬದಿಯಲ್ಲಿ - RAINER BRAMBACH's "BY THE RIVER"

ಮೂಲ: BY THE RIVER  

ಕವಿ: ರಾಯ್ನರ್ ಬ್ರಾಮ್‌ಬಾಖ್ (1917-1983)ಸ್ವಿಟ್ಜರ್‌ಲೆಂಡ್‌ನ ಜರ್ಮನ್ ಭಾಷಾ ಕವಿ

RAINER BRAMBACH (1917-1983), 

German language poet from SWITZERLAND

Translated into English by ESTHER KINSKY

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ನದಿಯ ಬದಿಯಲ್ಲಿ

 

ನದಿಯ ನೀರು ಹರಿಯುತಿದೆ ಏನೂ ಆಗಿಲ್ಲವೆಂಬಂತೆ

ದಡದಲ್ಲಿ ಏನೇನು ಬೇರೂರಿವೆಯೋ

ಬಾಯಿ ಮುಚ್ಚಿಕೊಂಡಿವೆ.

ಬಾತುಕೋಳಿಯೊಂದು ಹಾರುತ್ತೆ ಮೇಲಕ್ಕೆ – ಕ್ವಾಕ್‌ಕ್ವಾಕ್ ಅನ್ನುತ್ತಾ,

ಬಹುಶಃ ಸಾಕ್ಷಿಯೋ ಏನೋ—

ಅದರ ಹೇಳಿಕೆ ದಾಖಲಾಗಲಿಲ್ಲ.

 

ಮೇಪಲ್ ಎಲೆಯೊಂದನ್ನು, ಲೊಡ್ಡಾದ ಮರದ ತುಂಡೊಂದನ್ನು 

ನೀರಿನಡಿಯ ಕಿರುದೆರೆಯೊಂದು ಸುತ್ತಿಸಲು ಯತ್ನಿಸುತ್ತದೆ.

ಹಗುರವಾದವು ಅವು, ತೇಲಾಡುತ್ತಾ ಹೋಗುತ್ತವೆ—

ತೂತಾಗಿರುವ ದೋಣಿಯನ್ನು ಏರಿಸುವುದು

ಯಾವ ಉಪಯೋಗಕ್ಕೂ ಬಾರದು, ಅವನೊಬ್ಬನನ್ನೇ

ಅವರು ಈಗಲೂ ಹುಡುಕುತ್ತಿದ್ದಾರೆ, ನಿನ್ನೆ ಮಧ್ಯಾಹ್ನ ಇಲ್ಲಿ ಕೂತಂವ

ತನ್ನ ಕೋಟನ್ನು ವಿಲೊ ಪೊದೆಯಲ್ಲಿ ಬಿಟ್ಟು ಹೋದಂವ.

 

*****


ಕಾಲದ ಮರಳು - SASHO SERAFIMOV's "THE SAND OF TIME"

ಮೂಲTHE SAND OF TIME

ಕವಿಸಾಶೊ ಸೆರಾಫಿಮೊವ್ಬಲ್ಗೇರಿಯಾ

SASHO SERAFIMOV, BULGARIA

Translated from the Bulgarian into English by 

Katerina Stoykova-Klemer

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಕಾಲದ ಮರಳು

 

ಇನ್ನೊಬ್ಬರ ಮಾತುಗಳನ್ನ ಡುವುದು ಸುಲಭ

ಇನ್ನೊಬ್ಬರ ಬಲದಿಂದ ಯುದ್ಧಮಾಡುವುದು ಸುಲಭ

ಇನ್ನೊಬ್ಬರ ದುಡ್ಡನ್ನು ಖರ್ಚು ಮಾಡುವುದು ಸುಲಭ

 

ನನ್ನ ಎಲ್ಲವೂ ಪಾರದರ್ಶಕ,

ಮತ್ತು ನಾನಿವತ್ತು ಹಂಚಿಕೊಳ್ಳುವ ಅನಿಸಿಕೆಗಳು

ಬಹುಶಃ ಇನ್ನೊಬರಾರೊ ಹೇಳಿರುವರು.

ಒಂದು ನೀರಹನಿ ವರ್ಣವ್ಯಾಪ್ತಿಯನ್ನು ಹೇಗೆ ಬಿಂಬಿಸುತ್ತೋ, 

ಈ ಲೋಕವನ್ನು ಬಿಂಬಿಸುವಂತಹ 

ಆ ಒಂದು ಪದವನ್ನು ಹೇಳಬಯಸುವೆ ನಾನು

 

ಒಂದು ಇರುವೆ ಮಾಡುವುದಕ್ಕಿಂತ ಹೆಚ್ಚೇನೂ ಮಾಡುವುದಿಲ್ಲ ನಾನು,

ನಡೆಯುತ್ತೆ, ಕಾಳನ್ನು ಹೊರುತ್ತೆ,

ನಾನೊಂದು ಕಾಲುವೆ ಕಂಡಾಗ – 

ಅದರ ನೀರ ಕುಡಿಯುವೆ

ನಾನೊಂದು ದಾರಿ ಕಂಡುಹಿಡಿದಾಗ – 

ಅಲ್ಲೊಂದು ಫಲಕ ನೆಡುವೆ

ಪರವಾಗಿಲ್ಲ ಈ ಲೋಕ ಓಡಾಡಲು ಎಂದು.

 

ಕಳೆದುಹೋಗುವುದು ಎಷ್ಟು ಅಪಾಯಕರವೆಂದು ಕೆಲವೊಮ್ಮೆ ಅನಿಸುತ್ತೆ.

 

ತಾನೆಲ್ಲಿಗೆ ಹೋಗುತ್ತಿದ್ದೇನೆಂದು

ಆ ಚಿಕ್ಕ ಹುಡುಗಿಗೆ ಸಹ ಗೊತ್ತಿರುತ್ತೆ

ಅವಳು ಅಲೆಗಳತ್ತ ಓಡುವಾಗ

ಕೈಯಲ್ಲಿ ಬಕೆಟನ್ನು ಹಿಡಿದುಕೊಂಡು.

ಗತಿಸಿದ ಕಾಲದ ಮರಳನ್ನ ಅವಳು ಒಯ್ಯುತ್ತಿದ್ದಾಳೆ

ಒಂದು ಕನಸ ಕಟ್ಟಲು.

*****


ಮಾತುಕತೆ - SASHO SERAFIMOV's "CONVERSATION"

ಮೂಲCONVERSATION

ಕವಿಸಾಶೊ ಸೆರಾಫಿಮೊವ್ಬಲ್ಗೇರಿಯಾ 

SASHO SERAFIMOV, BULGARIA

Translated from the Bulgarian into English by 

Katerina Stoykova-Klemer

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಮಾತುಕತೆ

 

ಒಂದು ಕವನ ಮತ್ತು ನಾನು ಹೋಟಲಲ್ಲಿ ಚಾ ಕುಡಿಯುತ್ತಿದ್ದೆವು

ಗೊಣಗುತ್ತಿತ್ತು ಅದು

ಅದರ ಆಕಾಶ ಅಷ್ಟೊಂದು ನೀಲಿಯಾಗಿಲ್ಲವೆಂದು,

ಅದರ ನದಿ ಅಷ್ಟೊಂದು ತಿಳಿಯಾಗಿಲ್ಲವೆಂದು,

ಅದರ ಪ್ರೇಮವನ್ನು ಯಾರೋ ಕದ್ದರೆಂದು

ಜನರು ಈಗ ಅದನ್ನು ಒಂದು ಪ್ರೇಮಕವನದಂತಲ್ಲ, ಮಳೆಗವನದಂತೆ ಕಾಣುತ್ತಾರೆಂದು.

‘ಮತ್ತೆ ನಿನಗೆ ಸ್ವಾತಂತ್ರ್ಯವಿದೆಯಾ?’ ಕವನವ ನಾ ಕೇಳಿದೆ,

ಸುಮ್ನೆ ಮಾತು ಮುಂದುವರಿಸಲು ಅಷ್ಟೇ.

‘ಎಂತ ಸ್ವಾತಂತ್ರ್ಯ! ಯಾರು ಬಳಸುತ್ತಾರದನ್ನ ಈಗ?’

ಸ್ವಾತಂತ್ರ್ಯ, ಅದು ಕವಿಗಳ ನಾಡು ಎಂದುಕೊಂಡಿದ್ದೆ ನಾನು, ಆದರೆ 

ಅದು ಸುಳ್ಳೆಂದು, ದಂತಕಥೆಯೆಂದು, ಕಟ್ಟುಕಥೆಯೆಂದು ತಿಳಿಯಿತು, ಅಟ್ಲಾಂಟಿಸ್‌ನ ಹಾಗೆ.

ಎಲ್ಲರೂ ಅದರ ಬಗ್ಗೆ ಮಾತಾಡುತ್ತಾರೆ, ಅದರೆ ಎಂದೂ ಕಂಡಿದ್ದಿಲ್ಲ.  

 

*****


ಕಡಲು ಪ್ರಶಾಂತವಾಗಿ ಮರ್ಮರಿಸುತ್ತಿದೆ - HASSO KRULL's "THE SEA RUSTLES QUIETLY"

ಮೂಲTHE SEA RUSTLES QUIETLY

ಕವಿಹಾಸೊ ಕ್ರಲ್ಎಸ್ಟೋನಿಯಾ HASSO KRULL, ESTONIA

Translated from the Estonian by Brandon Lussier

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ಕಡಲು ಪ್ರಶಾಂತವಾಗಿ ಮರ್ಮರಿಸುತ್ತಿದೆ

 

ಕಡಲು ಪ್ರಶಾಂತವಾಗಿ ಮರ್ಮರಿಸುತ್ತಿದೆ, 

ಹರಿವ ನದಿಯಂತೆ,

ಅದು ನದಿಯಲ್ಲ, ಅದು ಕಡಲು, 

ದೌಡುತ್ತವೆ ಮೋಡಗಳು 

ಅಡವಿಯ ಮೇಲೆ, 

ಜೂನಿಪರ್ ಪೊದೆಯ ಮೇಲೆ, 

ಅವು ನದಿಯಂತೆ ಹರಿಯುತ್ತವೆ,

ದರೆ ಅವುಗಲೋಳಗೆ ಒಂದು ತೂತಿದೆ,

ಮೋಡಗಳೊಳಗೆ ಒಂದು ತೂತಿದೆ,

 

ಅದರಿಂದಾಗಿ, 

ಸವಿಕಂಪಿನ ಕಾಡುಗುಲಾಬಿ ಹೂಗಳು ಕಾಣಿಸುವುದು, 

ಇಲ್ಲ, ಅವು ಕಾಣಿಸುವುದಿಲ್ಲ, 

ನಾನು ಸುಳ್ಳು ಹೇಳಿದೆ, 

ಆದರೆ ಈಗಲೂ ಕಾಡುಗುಲಾಬಿ ಹೂಬಿಡುತ್ತದೆ, 

ಮೋಡಗಳು ಧಾವಿಸುತ್ತೆ, 

ನನ್ನ ಜತೆ ಸೇರಿ ಸುಳ್ಳು ಹೇಳುತ್ತವೆ, 

ಎಂದೇ ಭೂಮಿ ಕಪ್ಪಾಗಿದೆ,

 

ಎಂದೇ ಹುಲ್ಲು ಹಸಿರಾಗಿದೆ, 

ಲಿಲಿ ಹೂಗಳು ಹಳದಿಯಾಗಿವೆ, 

ಮೋಡಗಳು ಇವೆಲ್ಲರ ಬಗ್ಗೆ ಸುಳ್ಳಾಡುತ್ತವೆ, 

ಅಂದ್ರೆ, ಸುಳ್ಳು ಹೇಳುವ ಕಲೆ ನಶಿಸಿಲ್ಲ, 

ನಿಜ ಹೇಳಬೇಕೆಂದರೆ, 

ಅದು ಹೊಸ ಪರಾಕಾಷ್ಠೆಗೇರಿದೆ.

 

ಅದು ಕಡಲನ್ನು ಘರ್ಜಿಸುವಂತೆ, 

ಹಕ್ಕಿಗಳನ್ನು ಹಾಡುವಂತೆ, 

ಕೆಂಪು ಪಿಯೋನಿ ಹೂಗಳನ್ನು ಅರಳುವಂತೆ ಮಾಡುತ್ತೆ,

ಕಡಲು ಪ್ರಶಾಂತವಾಗಿ ಮರ್ಮರಿಸುತ್ತೆ,

ಅದು ನದಿಯಲ್ಲ ಮತ್ತೆ,

ನದಿಯನ್ನು ಮೋಡಗಳ ಎತ್ತರಕ್ಕೆ ಏರಿಸಲಾಗಿದೆ,

ಈ ಮೋಡಗಳು ಅವುಗಳಿಂದಾದಷ್ಟು ಸುಳ್ಳಾಡುತ್ತವೆ,

ಅವುಗಳೊಳಗೆ ಒಂದು ತೂತಿದ್ದರೂ ಸಹ.

 

*****


ಬಾವಿಯ ಚಿಲುಮೆಯಲ್ಲಿ ಪರಾಗ ಮತ್ತು ಗರಿಕೆ ಬೀಜಗಳು ಈಜುತ್ತಿವೆ - HASSO KRULL's "POLLEN AND MEADOW-GRASS SEEDS SWIM IN THE WELLSPRING"

ಮೂಲPOLLEN AND MEADOW-GRASS SEEDS SWIM IN THE WELLSPRING

ಕವಿಹಾಸೊ ಕ್ರಲ್ಎಸ್ಟೋನಿಯಾ HASSO KRULL, ESTONIA

Translated from the Estonian by Brandon Lussier

ಕನ್ನಡ ಅನುವಾದಎಸ್. ಜಯಶ್ರೀನಿವಾಸ ರಾವ್

 

ಬಾವಿಯ ಚಿಲುಮೆಯಲ್ಲಿ ಪರಾಗ ಮತ್ತು ಗರಿಕೆ ಬೀಜಗಳು ಈಜುತ್ತಿವೆ

 

ಬಾವಿಯ ಚಿಲುಮೆಯಲ್ಲಿ ಪರಾಗ ಮತ್ತು ಗರಿಕೆ ಬೀಜಗಳು ಈಜುತ್ತಿವೆ.

ತಿಳಿಯಾದ ಚಿಲುಮೆಯದು.   ಹೂಜಿಯನ್ನು ಹಿಡಿದ ಕೈಯನ್ನು ಮುಂದೆ ನೀಡಿದಾಗ 

ಗಮನಿಸಿದೆ ನಾನು ಒಂದು ಬಸವನಹುಳು ಸಹ ತೇಲುತ್ತಿದೆ ನೀರಿನಲಿ,

ಕೆಂಪು ಕಪ್ಪೆಯೊಂದು ಕಲ್ಲಿನ ಮೇಲೆ ಕಾದಿದೆ, ಹಾರಲು ತಯಾರಾಗಿ.

 

ತಿಳಿಯಾದ ಚಿಲುಮೆ. ಗಮನಿಸುವೆ ನಾನು ತಳದಲ್ಲಿ ಚುರುಕಾಗಿ ಚಲಿಸುವ ಪಾಚಿಯನ್ನು, 

ಅದು ಕಲ್ಲುಗಳ ಸುತ್ತ ಸುಳಿದಾಡುವುದು ಉಜ್ವಲವರ್ಣದ ಗೀರುಗಳನ್ನೆಳೆಯುತ್ತಾ

ಮೆತ್ತನೆಯ ರತ್ನಗಂಬಳಿಯಂತೆ.  ಈ ನಡುವೆ, ಕಪ್ಪೆ 

ನೀರಿಗೆ ಹಾರಲು ನಿರ್ಧರಿಸಿತು, ಬಲವಾಗಿ ಈಜಿ

 

ಕಪ್ಪೆ ಆ ಬದಿಯ ದಡದ ಮೇಲೆ ಏರಿತು.  ಈಗ, ಸೊಳ್ಳೆಗಳು 

ನನ್ನನ್ನು ಗಮನಿಸಿದವು.  ಬೇಗ ಬೇಗ ಕೆಲಸ ಮಾಡುತ್ತಾ, 

ಬಸವನಹುಳುವನ್ನು ಹೂಜಿಯಿಂದ ಹೊರತೆಗೆದೆ, ಬಕೆಟುಗಳನ್ನು ತುಂಬಿಸಿದೆ, 

ಹಸಿರು ಹೇನುಗಳ ಜೋಡಿ, ಒಂದು ಜೇಡ ಹೊಳೆಯುವ ನೀರಿನಲ್ಲಿ ನೆನೆಯುತ್ತಿದ್ದವು.

 

ಚಿಲುಮೆಯ ನೀರು ತಿಳಿಯಾಗಿದೆ, ಕನಸಿನ ಹಾಗೆ.

ಭೂಮಿಯ ಕನಸಿನಂತೆ, ನಿರ್ಮಲ, ಪ್ರಾಚೀನ.  

ನಾನು ಅವಸರವಸರವಾಗಿ ಗುಡ್ಡವ ದಾಟುವೆ 

ಎರಡು ತೂಕಗಳ ಹೊತ್ತ ತಕ್ಕಡಿಯ ಹಾಗೆ, 

ನಂತರ ಕಪ್ಪಿನಿಂದ ನೀರು ಕುಡಿಯುವೆ, 

ಗರಿಕೆ ಬೀಜಗಳಿಂದ ತುಂಬಿತು ನನ್ನ ಬಾಯಿ.

 

*****


ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...